ವಿಜಯಸಾಕ್ಷಿ ಸುದ್ದಿ, ರಿಪ್ಪನ್ಪೇಟೆ: ಬಾಳುವುದಾದರೆ ಸಮುದ್ರದಂತೆ ಬಾಳಿ, ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ ಎಂದು ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಅವರು ಸಮೀಪದ ಗವಟೂರು ಹೊಳೆಸಿದ್ಧೇಶ್ವರ ದೇವಸ್ಥಾನ ಸಮಿತಿಯವರು ಹಮ್ಮಿಕೊಂಡ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ನಮ್ಮ ನಾಲಿಗೆ ಒಳ್ಳೆಯದಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ. ಯಥಾ ದೃಷ್ಟಿ; ತಥಾ ಸೃಷ್ಟಿ ಎಂಬಂತೆ ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು ಎಂಬ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ ದಶಧರ್ಮ ಸೂತ್ರಗಳಲ್ಲಿ ಒಂದಾದ ದಾನದ ಮಹತ್ವ ಹೇಳುವಾಗ ‘ಸಹಜ ದಾನಂ ಉತ್ಕೃಷ್ಟ ದಾನಂ’ ಎಂದಿದ್ದಾರೆ. ಹಾಗಾಗಿ ಸತ್ಕಾರ್ಯಗಳಿಗೆ ದಾನವನ್ನು ಮಾಡುವುದು ಒಳಿತೆಂದರು.
ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಉಲ್ಲಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ, ದುಂಡರಾಜಪ್ಪಗೌಡ್ರು, ಗಂಗಾಧರ, ಅರುಣ, ಕುಬೇರಪ್ಪ, ಕೃಷ್ಣಯ್ಯಶೆಟ್ಟರು, ಜನಾರ್ಧನ್, ಎಂ.ಎಂ. ಪರಮೇಶಪ್ಪ, ಜೇನಿ ರಾಜು ಇತರರು ಉಪಸ್ಥಿತರಿದ್ದರು. ಚಂದ್ರಕಲಾ ಪ್ರಾರ್ಥಿಸಿದರು, ಜೆ.ಡಿ. ಮಲ್ಲಿಕಾರ್ಜುನ ಸ್ವಾಗತಿಸಿದರು. ನಾಗೇಂದ್ರ ನಿರೂಪಿಸಿದರು.



