ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ- ದೊಡ್ಡೂರ ರಸ್ತೆಯ ನಡುವೆ ಬುಧವಾರ ಖಾಸಗಿ ಶಾಲೆಯ ನಾಲ್ಕು ವರ್ಷದ ಪುಟ್ಟ ಕಂದನ ಸಾವು ಪಾಲಕರಲ್ಲಿ ಭಯ ಮೂಡಿಸಿದೆ. ಇದರಿಂದ ಖಾಸಗಿ ಶಾಲಾ ವಾಹನಗಳಲ್ಲಿ ಸಂಚರಿಸುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಶಾಲಾ ವಾಹನಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳು ಶುಕ್ರವಾರ ಬೆಳಿಗ್ಗೆ ಸೂರಣಗಿ ಗ್ರಾಮದಲ್ಲಿ ಬಸ್ ತಡೆದು ವಿನಂತಿ ಅರ್ಜಿ ಸಲ್ಲಿಸಿದರು.
ಬುಧವಾರ ಶಾಲಾ ಬಸ್ನಿಂದ ಬಿದ್ದ ಮಗು ಸಾವನಪ್ಪಿರುವದು ಕುಟುಂಬಕ್ಕೆ ಜೀವನಪರ್ಯಂತ ಮರೆಯಲಾರದ ಆಘಾತವಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ವಿಶೇಷ ಕಾಳಜಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಲ್ಲ ಶಾಲಾ ಸಂಸ್ಥೆಗಳು ನಡೆಸುವ ವಾಹನಗಳ ವಿಮೆ ಚಾಲ್ತಿಯಲ್ಲಿರುವದು, ವಾಹನದ ಪರವಾನಿಗೆ (ಪರ್ಮಿಟ್) ಹೊಂದಿರಬೇಕು, ಚಾಲಕ ಮತ್ತು ನಿರ್ವಾಹಕ ಶಾಲಾ ಗುರುತಿನ ಚೀಟಿ (ಐಡಿ ಕಾರ್ಡ್) ಹೊಂದಿರಬೇಕು, ವಾಹನದ ಒಳಗಡೆ ಸಿಸಿ ಕ್ಯಾಮೆರಾ ಅಳವಡಿಸಿರುವದು, ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಬಸ್ನಲ್ಲಿ ತುಂಬುವುದನ್ನು ತಡೆಗಟ್ಟಬೇಕು. ಸದರಿ ಕ್ರಮಗಳನ್ನು ಮುಂದಿನ ಸೋಮವಾರದ ಒಳಗಾಗಿ ಅಳವಡಿಸಿಕೊಳ್ಳದಿದ್ದರೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಹನುಮಂತ ಪೂಜಾರ, ಚಂದ್ರಶೇಖರ ಶೀರನಹಳ್ಳಿ, ಬಸವರಾಜ ದುರ್ಗದ, ಗಂಗಾಧರಯ್ಯ ಹಿರೇಮಠ, ಪ್ರವೀಣ ಸೂರಣಗಿ, ಬಸವರಾಜ ಬೆನಕನಹಳ್ಳಿ, ನವೀನ ಗೊಲ್ಲರ, ಸೋಮು ಬೆಟಗೇರಿ, ಪುಟ್ಟಯ್ಯ ಮಠಪತಿ, ಈರಣ್ಣ ಶೀರನಹಳ್ಳಿ, ಷಣ್ಮುಖ ಸೂರಣಗಿ, ಮಹೇಶ ಮೂಲಿಮನಿ, ಹನುಮಂತ ಪೂಜಾರ, ಮಲ್ಲೇಶಪ್ಪ ಕಳ್ಳಿಹಾಳ, ಬಸವರಾಜ ಮಡಿವಾಳರ, ಶಂಭಣ್ಣ ಸಂಕ್ಲೀಪುರ, ಮಲ್ಲಿಕಾರ್ಜುನ ಇಟಗಿ, ನಾಗಪ್ಪ ಜಾಡರ, ಉದಯ ಕಳ್ಳಿಹಾಳ, ಅಂಬರೀಶ ಬೆನಕನಹಳ್ಳಿ, ಪವನ ಅರಳಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.



