ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನ ಭಾಗದ ರೈತರು ಹೊಲಗಳಲ್ಲಿ ಹಚ್ಚ ಹಸಿರಿನ ಬೆಳೆಗಳ ಮಧ್ಯೆ ಭೂಮಿ ತಾಯಿಯ ಪೂಜೆ ಮಾಡಿ, ಉಡಿ ತುಂಬಿ ಪ್ರಾರ್ಥಿಸಿ, ಚರಗ ಸಮರ್ಪಿಸುವ ಹಾಗೂ ಸಾಮೂಹಿಕ ಭೋಜನ ಸವಿಯುವ ಪರಂಪರೆಯ ಪ್ರತೀಕದ ಎಳ್ಳ ಅಮವಾಸ್ಯೆ ಹಬ್ಬ ರೈತರಿಗೆ ಸಂಭ್ರಮದ ದಿನ.
ಹಿಂಗಾರು ಹಂಗಾಮಿನ ಬಿಳಿಜೋಳ ಮುಂತಾದ ಬೆಳೆಗಳು ಹುಲುಸಾಗಿ ಬೆಳೆಯಲಿ ಮತ್ತು ಎಳ್ಳಿನಷ್ಟಾದರೂ ಭಕ್ತಿ ಭೂರಮೆಯ ಮೇಲಿರಲಿ ಎಂದು ಪ್ರಾರ್ಥಿಸುವ ಹಬ್ಬವೇ ಎಳ್ಳ ಅಮವಾಸ್ಯೆ. ಚಳಿಯ ಏರಿಳಿತದ ಅವಧಿಯಲ್ಲಿ ಆಚರಿಸುವ ಈ ಹಬ್ಬಕ್ಕೆ ಎಳ್ಳ ಅಮವಾಸ್ಯೆ ಹೆಸರು ಬಂದಿರಬಹುದು ಎಂಬುದು ಹಿರಿಯರ ಅಭಿಪ್ರಾಯ. ಹಬ್ಬದ ಸಂದರ್ಭದಲ್ಲಿ ಬಿಳಿಜೋಳ ಮತ್ತು ಗೋಧಿ ತೆನೆಗಳು ಹೊರಬರುವ ತವಕದಲ್ಲಿರುವುದು ಸಮೃದ್ಧ ಬೆಳೆಯ ಸಂಕೇತ. ರೈತರು ಸೀಮಂತ ಮಾದರಿಯಲ್ಲಿ ಹೊಲದ ಕೊಂಪಿಯಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಪಾಂಡವರಿಗೆ ಮತ್ತು ಲಕ್ಷ್ಮೀದೇವಿಗೆ ನೈವೇದ್ಯ ಅರ್ಪಿಸಿ ಬೆಳೆಗೆ ಯಾವುದೇ ರೋಗ ಬಾಧೆಯಾಗದಿರಲಿ ಹಾಗೂ ಉತ್ತಮ ಫಸಲು ಬರಲೆಂದು ಪ್ರಾರ್ಥಿಸಿದರು.
ಹಬ್ಬದಂದು ಚರಗ ಚೆಲ್ಲುವ ಸಂಪ್ರದಾಯ ಪ್ರಾಚೀನ ಕಾಲದಿಂದ ಬಂದಿದೆ. ಇದರ ಬಳಿಕ ಎಲ್ಲರ ಸಾಮೂಹಿಕ ಭೋಜನ. ಈ ಭಾಗದ ಎಲ್ಲರ ಮನೆಯಲ್ಲಿ ಎಳ್ಳ ಅಮವಾಸ್ಯೆ ದಿನದಂದು ಮಾಡುವ ವಿಶೇಷ ಖಾದ್ಯಗಳಿಗೆ ಸಾಟಿಯಿಲ್ಲ. ಬೆಳಗ್ಗೆ ತಮ್ಮ ಮನೆಗಳಲ್ಲಿ ವಿವಿಧ ಖಾದ್ಯಗಳ ಅಡುಗೆ ತಯಾರಿಸಿ, ಹೊಲಕ್ಕೆ ತೆರಳಿ ಹಸಿರು ಸೀರೆಯನ್ನುಟ್ಟ ಭೂತಾಯಿಗೆ ಉಡಿ ತುಂಬಿ, ಪೂಜಿಸಿ, ಎಲ್ಲರೂ ಒಂದೆಡೆ ಕುಳಿತು ಮೃಷ್ಟಾನ್ನ ಭೋಜನ ಸವಿದರು.
ಹೊಲಕ್ಕೆ ತೆರಳಿದ ಮಹಿಳೆಯರು ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕ ಐದು (ಪಂಚ ಪಾಂಡವರು) ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಭೂತಾಯಿಗೆ ಪ್ರಾರ್ಥಿಸಿ, ಉಡಿ ತುಂಬಿ, ನೈವೇದ್ಯ ಅರ್ಪಿಸಿದ ಬಳಿಕ ಹೊಲದ ತುಂಬೆಲ್ಲ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆ ಚರಗ ಚೆಲ್ಲಿದರು. ಹೊಲಕ್ಕೆ ಹೋದ ಮನೆ ಮಂದಿ, ಬೀಗರು ಹಾಗೂ ಅಕ್ಕ-ಪಕ್ಕದ ಮನೆಯವರು, ಜಮೀನಿನ ಸಮೀಪ ಹಾದುಹೋಗುವ ಅಪರಿಚಿತರನ್ನೂ ಕರೆದು, ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಿದರು.



