ವಿಜಯಸಾಕ್ಷಿ ಸುದ್ದಿ, ಗದಗ: ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ರೈತ ರಾಮಪ್ಪ ರಂಗಪ್ಪ ಕಾಶಪ್ಪನವರ ಇವರ ಹೊಲದಲ್ಲಿ ಸಂಭ್ರಮದಿಂದ ಎಳ್ಳು ಅಮವಾಸ್ಯೆಯನ್ನು ಭೂ ತಾಯಿಗೆ ಚರಗ ಚೆಲ್ಲುವ ಮೂಲಕ ಆಚರಿಸಲಾಯಿತು. ವರ್ಷಾನುಗಟ್ಟಲೇ ದುಡಿದ ದೇಹಗಳು ಸಂಭ್ರಮಿಸುವ ದಿನ. ಅನ್ನ ನೀಡುವ ಭೂ ತಾಯಿಗೆ ಸೀಮಂತ ಮಾಡಿ ಉಣಬಡಿಸುವ ಸಂತಸದ ದಿನ. ಗದಗ ಜಿಲ್ಲೆಯಾದ್ಯಂತ ಎಲ್ಲ ರೈತರು ಈ ದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
ರೈತರು ಎತ್ತುಗಳನ್ನು ಅಲಂಕರಿಸಿ, ಚಕ್ಕಡಿ ಹೂಡಿಕೊಂಡು ಸಾಲು ಸಾಲಾಗಿ ಹೊರಟಿದ್ದ ಬಗೆ ಕಣ್ಣಿಗೆ ಹಬ್ಬವನ್ನುಂಟುಮಾಡುವಂತಿತ್ತು. ಮನೆಯ ಸಂಬಂಧಿಕರೆಲ್ಲಾ ಬಗೆ ಬಗೆಯ ಅಡುಗೆ ಮಾಡಿಕೊಂಡು ತಮ್ಮ ತಮ್ಮ ಹೊಲಗಳಿಗೆ ತೆರಳಿ ಬನ್ನಿ ಮರಕ್ಕೆ ಸೀರೆ ತೊಡಿಸಿ, ಉಡಿತುಂಬಿ, ಕೈಗೆ ಕಂಕಣ ಕಟ್ಟಿ, ಐದು ಕಲ್ಲುಗಳನಿಟ್ಟು ಪಂಚ ಪಾಂಡವರೆಂದು ಪೂಜಿಸಿದರು. ನೈವೇದ್ಯದ ಮೂಲಕ ಪೂಜೆ ಮಾಡಿ ಹುಲ್ಲಲಿಗೂ… ಚಳಾಂಬ್ರಿಗೋ ಅಂತ ಸಿಹಿ ತಿನಿಸುಗಳನ್ನು ಸುತ್ತ ಎರಚಿ ಮಳೆ-ಬೆಳೆ ಚೆನ್ನಾಗಿ ಆಗಲೆಂದು ಭಕ್ತಿಯಿಂದ ಬೇಡಿಕೊಂಡರು.
ಮುಂಗಾರು ಫಸಲು ಬಂದಾಗ ಮಳೆ ಅಬ್ಬರವಿರುತ್ತೆ. ಭೂ ತಾಯಿಯನ್ನು ಪೂಜೆ ಮಾಡಲಾಗುವುದಿಲ್ಲ. ಹಾಗಾಗಿ ಹಿಂಗಾರು ಸಂದರ್ಭದಲ್ಲಿ ಎಳ್ಳು ಅಮವಾಸ್ಯೆ ವೇಳೆ ಭೂತಾಯಿಗೆ ಸೀಮಂತ ಮಾಡಲಾಗುತ್ತದೆ. ದೂರದ ಊರಿನ ಸಂಬಂಧಿಕರನ್ನು ಹಬ್ಬಕ್ಕೆ ಕರೆದು, ಎಲ್ಲರೂ ಒಟ್ಟಿಗೆ ಪೂಜೆಮಾಡಿ ಒಟ್ಟಿಗೆ ಊಟ ಮಾಡಿ ಸಂಭ್ರಮಿಸಿದರು.
ವರ್ಷಾನುಗಟ್ಟಲೇ ಸಮಸ್ಯೆಗಳ ಸರಮಾಲೆಯಲ್ಲಿ ಬಳಲಿದ ರೈತ ಈ ದಿನದಂದು ಆ ನೋವನ್ನೆಲ್ಲ ಮರೆತು ಸಂತಸದ ಕ್ಷಣಗಳನ್ನು ಅನುಭವಿಸಿದರು. ರೈತರನ್ನು ಸದಾ ಕಾಪಾಡುವ ಭೂತಾಯಿಗೆ ನಮಿಸಿ ಪುನೀತರಾದರು.



