ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಚೈತ್ರಾ ಕುಂದಾಪುರ ಅವರಿಗೆ ಈಗ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ತಂದೆ ಬಾಲಕೃಷ್ಣ ನಾಯ್ಕ್ ಸಲ್ಲಿಸಿದ್ದ ದೂರಿನ ಮೇರೆಗೆ ಹಿರಿಯ ನಾಗರಿಕರ ನ್ಯಾಯಾಲಯ ಚೈತ್ರಾ ವಿರುದ್ಧ ಆದೇಶ ನೀಡಿದ್ದು, ಕುಂದಾಪುರ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಬಾಲಕೃಷ್ಣ ನಾಯ್ಕ್ ಅವರು, ಮಗಳು ಚೈತ್ರಾ ಮತ್ತು ಪತ್ನಿಯಿಂದ ತಮಗೆ ಕಿರುಕುಳವಾಗುತ್ತಿದೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಬಾಲಕೃಷ್ಣ ನಾಯ್ಕ್ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ಆದೇಶಿಸಿದ್ದು, ಅವರು ತಮ್ಮ ಮನೆಯಲ್ಲಿ ಭಯವಿಲ್ಲದೆ ವಾಸಿಸುವಂತಾಗಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ. ಜೊತೆಗೆ, ಈ ವಿಚಾರದಲ್ಲಿ ಚೈತ್ರಾ ಕುಂದಾಪುರ ಅವರಿಂದ ಕಾನೂನುಬದ್ಧ ಮುಚ್ಚಳಿಕೆ ಪಡೆಯುವಂತೆ ಸೂಚಿಸಲಾಗಿದೆ.
ಚೈತ್ರಾ ಕುಂದಾಪುರ ಮತ್ತು ಅವರ ತಂದೆಯ ನಡುವಿನ ಸಂಘರ್ಷ ಈ ಮೊದಲು ಸಾರ್ವಜನಿಕವಾಗಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಚೈತ್ರಾ ಮದುವೆ ಸಂದರ್ಭದಲ್ಲಿ ತಂದೆ ವಿರೋಧ ವ್ಯಕ್ತಪಡಿಸಿದ್ದರೆ, ಅದಕ್ಕೆ ಪ್ರತಿಯಾಗಿ ಚೈತ್ರಾ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷವಾಗಿ ಕಿಡಿಕಾರಿದ್ದರು. ಈ ಘಟನೆಗಳೇ ಕುಟುಂಬದಲ್ಲಿ ಬಿರುಕು ಮೂಡಲು ಕಾರಣವಾಗಿವೆ ಎನ್ನಲಾಗಿದೆ.
ಈ ಹಿಂದೆ ಬಿಗ್ ಬಾಸ್ ಕನ್ನಡ 11ನೇ ಸೀಸನ್‌ನಲ್ಲಿ ಸ್ಪರ್ಧಿಸಿದ್ದ ಚೈತ್ರಾ, ಈಗ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಆದರೆ, ನ್ಯಾಯಾಲಯದ ಈ ಆದೇಶದಿಂದಾಗಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾದ ಪರಿಸ್ಥಿತಿ ಉಂಟಾಗುತ್ತದೆಯೇ ಎಂಬುದು ಈಗ ಪ್ರೇಕ್ಷಕರ ಕುತೂಹಲವಾಗಿದೆ.



