ವಿಜಯಸಾಕ್ಷಿ ಸುದ್ದಿ, ಧಾರವಾಡ: ಭಾರತ ಸರ್ಕಾರವು ಮುಂದಿನ 10 ವರ್ಷಗಳಲ್ಲಿ ಇಡೀ ದೇಶವನ್ನು ಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಅಭಿಯಾನ ಹಮ್ಮಿಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ, ಜಿಲ್ಲೆಗಳಿಗೆ ಸೂಚಿಸಿದೆ. ಧಾರವಾಡ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪೂರ್ವದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳನ್ನು ಬಾಲ್ಯ ವಿವಾಹ ಮುಕ್ತ ಗ್ರಾಮಗಳನ್ನಾಗಿ ಘೋಷಿಸಬೇಕು. ಅದಕ್ಕಾಗಿ ಹಮ್ಮಿಕೊಂಡಿರುವ 100 ದಿನಗಳ ಮಕ್ಕಳ ಜಾಗೃತಿ ಕಾರ್ಯಕ್ರಮಗಳು ಜಿಲ್ಲೆಯ ಪ್ರತಿ ಮನೆಗಳಿಗೆ ತಲುಪಬೇಕೆಂದು ಜಿಲ್ಲಾ ಬಾಲ್ಯ ವಿವಾಹ ನಿಷೇಧ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಶನಿವಾರ ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ 1098 ಮತ್ತು 112 ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳನ್ನು ಹೊಂದಿರುವ ಬಾಲ್ಯ ವಿವಾಹ ನಿಯಂತ್ರಣ ಮತ್ತು ನಿಷೇಧ ಸಮಿತಿಗಳನ್ನು ರಚಿಸಿ ಸಕ್ರಿಯಗೊಳಿಸಲಾಗಿದೆ. ಕಳೆದ ವರ್ಷ ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗಿದ್ದು, ಮುಂದಿನ ವರ್ಷಕ್ಕೆ ಅದನ್ನು ಶೂನ್ಯಗೊಳಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕೆಂದು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬಾಲ್ಯ ವಿವಾಹಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಸರ್ವೋಚ್ಛ, ಉಚ್ಚ ನ್ಯಾಯಾಲಯಗಳು ನಿರ್ದೇಶಿಸಿವೆ. ಅದರಂತೆ ಇಡೀ ದೇಶದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಅಭಿಯಾನವನ್ನು ಆರಂಭಿಸಲಾಗಿದೆ. ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗಳು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಕೈಜೋಡಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವಾಯ್. ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್. ಹೊನಕೇರಿ, ಡಿವೈಎಸ್ಪಿ ವಿನೋದ ಮುಕ್ತೇದಾರ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹ್ಮದ್ಅಲಿ ತಹಸೀಲ್ದಾರ ನಿರೂಪಿಸಿದರು. ಪ್ರಕಾಶ ಕೊಡ್ಲಿವಾಡ ವಂದಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಾನುಮತಿ ಎಚ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕಿ ಡಾ. ಕಮಲಾ ಬೇಲೂರು ಹಾಗೂ ಎಲ್ಲ ತಾಲೂಕಿನ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಲ್ಯ ವಿವಾಹವನ್ನು ಹೋಗಲಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಿಳುವಳಿಕೆ ನೀಡಿದರೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಪ್ರತಿಯೊಂದು ಹಂತದಲ್ಲಿ ಜನರಿಗೆ ತಿಳುವಳಿಕೆಯನ್ನು ನೀಡಿ, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ನಾಗರಿಕರ ಕರ್ತವ್ಯ ಹಾಗೂ ಸಮಾಜದ ಜವಾಬ್ದಾರಿಯೂ ಹೌದು ಎಂದು ಡಿ.ಸಿ. ದಿವ್ಯ ಪ್ರಭು ಹೇಳಿದರು.



