ಮಾರ್ಕ್ ಚಿತ್ರದ ಪ್ರೀ–ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಇದೀಗ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ವೇದಿಕೆಯಿಂದ ಸುದೀಪ್ ಆಡಿದ ಮಾತುಗಳು ದರ್ಶನ್ ವಿರುದ್ಧದ ಟಾಂಗ್ ಎಂದು ಫ್ಯಾನ್ಸ್ ವಲಯದಲ್ಲಿ ವ್ಯಾಖ್ಯಾನವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಈ ಬೆಳವಣಿಗೆಯ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳ ಜೊತೆ ಮಾತನಾಡುತ್ತಾ, “ದರ್ಶನ್ ಇಲ್ಲದಾಗ ಕೆಲವರು ವೇದಿಕೆಗಳ ಮೇಲೆ ಹಾಗೂ ಚಾನಲ್‌ಗಳಲ್ಲಿ ಕುಳಿತು ಏನೇನೋ ಮಾತಾಡುತ್ತಾರೆ. ಆದರೆ ಅವರು ಬಂದಾಗ ಎಲ್ಲಿರುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ” ಎಂದು ಪರೋಕ್ಷವಾಗಿ ಟೀಕಿಸಿದ್ದರು. ಜೊತೆಗೆ, “ಯಾರು ಏನೇ ಹೇಳಿದರೂ ಕೋಪ ಮಾಡಿಕೊಳ್ಳಬೇಡಿ” ಎಂಬ ಸಂದೇಶವನ್ನೂ ನೀಡಿದ್ದರು.
ಇದರ ನಂತರ ದರ್ಶನ್ ಆಪ್ತ ಧನ್ವೀರ್ ಗೌಡ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ಡೈಲಾಗ್ ಮೂಲಕ ಟಾಂಗ್ ನೀಡಿದ್ದಾರೆ. ದರ್ಶನ್ ಜೈಲು ಸೇರುವ ಅವಧಿಯಿಂದಲೂ ಧನ್ವೀರ್, ವಿಜಯಲಕ್ಷ್ಮಿ ಜೊತೆ ಜೈಲಿಗೆ ಭೇಟಿ ನೀಡುತ್ತಿದ್ದವರಾಗಿದ್ದು, ಅವರು ದರ್ಶನ್ ಕುಟುಂಬದ ಆಪ್ತ ವಲಯದಲ್ಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.
ಒಟ್ಟಿನಲ್ಲಿ, ಮಾರ್ಕ್ ಸಿನಿಮಾ ರಿಲೀಸ್‌ಗೂ ಮುನ್ನವೇ ಸ್ಟಾರ್‌ಗಳ ಹೇಳಿಕೆಗಳು ಮತ್ತು ಪ್ರತಿಕ್ರಿಯೆಗಳು ಅಭಿಮಾನಿ ವಲಯದಲ್ಲಿ ಕಿಚ್ಚು ಹಚ್ಚಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.



