ಹೈದರಾಬಾದ್‌ನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳು ಚಿತ್ರರಂಗದ ಮಹಿಳಾ ನಟಿಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ. ಡಿಸೆಂಬರ್ 17ರಂದು ದಿ ರಾಜಾ ಸಾಬ್ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮಕ್ಕಾಗಿ ಲುಲು ಮಾಲ್‌ಗೆ ಆಗಮಿಸಿದ್ದ ನಿಧಿ ಅಗರ್ವಾಲ್, ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಜನಸಮೂಹದಿಂದ ಅಸಭ್ಯ ವರ್ತನೆಗೆ ಒಳಗಾಗಿದ್ದರು.
ಆ ಸಂದರ್ಭದಲ್ಲಿ ಅಭಿಮಾನಿಗಳಂತೆ ನಟಿಸಿದ ಕೆಲವರು ನಿಧಿ ಅಗರ್ವಾಲ್ ಅವರನ್ನು ಸುತ್ತುವರಿದು, ಕೈ ಹಿಡಿದು, ದೇಹ ಸ್ಪರ್ಶಿಸಲು ಯತ್ನಿಸಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ನಟಿಯನ್ನು ತಳ್ಳಾಡಿದ ದೃಶ್ಯಗಳು ಕೂಡ ವಿಡಿಯೋಗಳಲ್ಲಿ ಕಂಡುಬಂದಿದ್ದವು.
ಈ ಘಟನೆಗೆ ಕೆಲವೇ ದಿನಗಳ ಬಳಿಕ, ಸಮಂತಾ ರುತ್ ಪ್ರಭು ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನತ್ತ ಸಾಗುವ ವೇಳೆ ಜನರು ಮುಗಿಬಿದ್ದ ಪರಿಣಾಮ ಗೊಂದಲ ಉಂಟಾಗಿದ್ದು, ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಘಟನೆ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ವರ್ತನೆ ಕುರಿತು ತೀವ್ರ ಟೀಕೆ ವ್ಯಕ್ತವಾಗಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರ ಸುರಕ್ಷತೆಗೆ ಕಠಿಣ ಕ್ರಮ ಅಗತ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.



