ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ೨೦೨೩ರ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿತ್ತು. ಈ ಸಿನಿಮಾದಲ್ಲಿನ ಅತಿಥಿ ಪಾತ್ರಗಳೇ ಪ್ರಮುಖ ಆಕರ್ಷಣೆಯಾಗಿದ್ದವು. ಅದರಲ್ಲೂ ನಟ ಶಿವರಾಜ್ ಕುಮಾರ್ ಅಭಿನಯಿಸಿದ್ದ ನರಸಿಂಹ ಪಾತ್ರ ತಮಿಳುನಾಡಿನ ಪ್ರೇಕ್ಷಕರ ಮನಗೆದ್ದಿತ್ತು.
‘ಜೈಲರ್’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಅವರಿಗೆ ತಮಿಳುನಾಡಿನಲ್ಲಿ ಹೊಸ ಅಭಿಮಾನಿ ವರ್ಗ ನಿರ್ಮಾಣವಾಗಿತ್ತು. ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣ ಹಂತದಲ್ಲಿದ್ದು, ಈ ಭಾಗದಲ್ಲಿಯೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಅವರು ಸ್ವತಃ ಬಹಿರಂಗಪಡಿಸಿದ್ದಾರೆ.
‘45’ ಸಿನಿಮಾದ ಪ್ರಚಾರದ ವೇಳೆ ಮಾತನಾಡಿದ ಶಿವರಾಜ್ ಕುಮಾರ್, “‘ಜೈಲರ್ ೨’ನಲ್ಲಿ ನನ್ನ ಪಾತ್ರ ಕೇವಲ ಅತಿಥಿ ಪಾತ್ರ ಮಾತ್ರವಲ್ಲ. ಮೊದಲ ಭಾಗದಲ್ಲಿ ನನ್ನ ಪಾತ್ರ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಮುಂದುವರಿಯಲಿದೆ. ಈ ಬಾರಿ ಪಾತ್ರಕ್ಕೆ ಇನ್ನಷ್ಟು ತೂಕ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಇನ್ನೂ ಚಿತ್ರೀಕರಣದ ಬಗ್ಗೆ ಮಾತನಾಡಿದ ಅವರು, “ಈಗಾಗಲೇ ಒಂದು ದಿನ ಚಿತ್ರೀಕರಣ ಮಾಡಿದ್ದೇನೆ. ಜನವರಿಯಲ್ಲಿ ಸುಮಾರು ನಾಲ್ಕು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ. ‘ಜೈಲರ್’ ಒಂದು ಯೂನಿವರ್ಸಲ್ ಕಂಟೆಂಟ್ ಸಿನಿಮಾ. ನಿರ್ದೇಶಕ ನೆಲ್ಸನ್ ರಜನೀಕಾಂತ್ ಅವರನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಅವರ ವಯಸ್ಸನ್ನೂ ಶಕ್ತಿಯಾಗಿ ಪರಿವರ್ತಿಸಿದ್ದಾರೆ” ಎಂದು ಹೇಳಿದರು.
‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಶಿವರಾಜ್ ಕುಮಾರ್ ಜೊತೆಗೆ ಮೋಹನ್ಲಾಲ್ ಹಾಗೂ ಜಾಕಿ ಶ್ರಾಫ್ ಗೆಳೆಯರ ಪಾತ್ರದಲ್ಲಿ ನಟಿಸಿದ್ದರು. ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮತ್ತು ಸುನಿಲ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವಿಲನ್ ಪಾತ್ರದಲ್ಲಿ ವಿನಾಯಗನ್ ಅಭಿನಯವೂ ಗಮನ ಸೆಳೆದಿತ್ತು.
ಇದೀಗ ‘ಜೈಲರ್ 2’ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಭಾಗದಲ್ಲಿ ನಂದಮೂರಿ ಬಾಲಕೃಷ್ಣ ಕೂಡ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ. ‘ಜೈಲರ್ ೨’ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.



