ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯಲ್ಲಿ ನಿರ್ಮಾಣವಾಗಲಿರುವ ಕಾಂಗ್ರೆಸ್ ಭವನಕ್ಕೆ ನಿವೇಶನದ ದಾನಪತ್ರವನ್ನು ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ವಿಜಯ ಮುಳಗುಂದ ಹಾಗೂ ಎಲ್.ನಾರಾಯಣ ಅವರಿಗೆ ಬುಧವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಜಾತಾ ದೊಡ್ಡಮನಿ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ರಾಜ್ಯಾದ್ಯಂತ 100 ತಾಲೂಕಾ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡಿದ್ದು, ಇದನ್ನು ನಮ್ಮ ಕ್ಷೇತ್ರದಲ್ಲಿ ಸಾಕಾರಗೊಳಿಸುವುದಕ್ಕೆ ಇಂದು ನಿವೇಶನವನ್ನು ಹಸ್ತಾಂತರಿಸಲಾಗಿದೆ. ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದೇನೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ, ಹಾಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷಕ್ಕಾಗಿ ಅಳಿಲು ಸೇವೆಯನ್ನು ಸಲ್ಲಿಸುವ ಸಮಯ ನನಗೆ ಒದಗಿ ಬಂದಿದ್ದರಿಂದ ಪಕ್ಷದ ಹಿರಿಯರ, ಕಾರ್ಯಕರ್ತರ ಸಮ್ಮುಖದಲ್ಲಿ ನಿವೇಶನದ ದಾನಪತ್ರವನ್ನು ಹಸ್ತಾಂತರಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಬ್ಲಾಕ್ ಅಧ್ಯಕ್ಷ ಹುಮಾಯೂನ್ ಮಾಗಡಿ, ದೇವಪ್ಪ ಲಮಾಣಿ, ವೀರಯ್ಯ ಮಠಪತಿ, ಅಜ್ಜು ಪಾಟೀಲ, ಮಾಬುಸಾಬ ಲಕ್ಷ್ಮೇಶ್ವರ, ಸೋಮನಗೌಡ ಮರಿಗೌಡ್ರ ಮುಂತಾದವರು ಉಪಸ್ಥಿತರಿದ್ದರು.



