ಢಾಕಾ: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ರಾಜಧಾನಿ ಢಾಕಾದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ಬುಧವಾರ ಸಂಜೆ ಮೊಗ್ಬಜಾರ್ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದ ಮುಂಭಾಗದ ಫ್ಲೈಓವರ್ ಬಳಿ ಈ ದುರ್ಘಟನೆ ಸಂಭವಿಸಿದೆ. ಫ್ಲೈಓವರ್ ಮೇಲಿನಿಂದ ಅಪರಿಚಿತ ದಾಳಿಕೋರರು ಕಚ್ಚಾ ಸ್ಫೋಟಕ ಸಾಧನವನ್ನು ಕೆಳಗೆ ಎಸೆದಿದ್ದಾರೆ. ನೆಲಕ್ಕೆ ಬಿದ್ದ ತಕ್ಷಣ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿದ್ದ ಸಿಯಾಮ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸಿಯಾಮ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಸ್ಫೋಟದ ಸಮಯದಲ್ಲಿ ಆ ಪ್ರದೇಶದಲ್ಲೇ ಇದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳವನ್ನು ಸುತ್ತುವರೆದು ಭದ್ರತೆ ಹೆಚ್ಚಿಸಿದ್ದಾರೆ. ಸ್ಫೋಟಕ ಎಸೆದ ತಕ್ಷಣ ದಾಳಿಕೋರರು ಪರಾರಿಯಾಗಿದ್ದಾರೆ.
ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಠಾಣೆಯ ರಾಮ್ನಾ ವಿಭಾಗದ ಉಪ ಆಯುಕ್ತ ಮಸೂದ್ ಆಲಂ ಮಾತನಾಡಿ, ಸ್ಫೋಟದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.



