ದಾವಣಗೆರೆ: ನ್ಯೂಜಿಲೆಂಡ್ ನಿವಾಸಿ ಕ್ಯಾಂಬೆಲ್ ವಿಲ್ ವರ್ಥ್ ಹಾಗೂ ದಾವಣಗೆರೆಯ ದಂತವೈದ್ಯೆ ಪೂಜಾ ನಾಗರಾಜ್ ಇಂದು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರು.
ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬಗಳ ಒಪ್ಪಿಗೆ ಪಡೆದ ಬಳಿಕ ದಾವಣಗೆರೆಯ ಖಾಸಗಿ ರೆಸಾರ್ಟ್ನಲ್ಲಿ ಕಲ್ಯಾಣ ನೆರವೇರಿತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಜನ್ಮಗೊಂಡ ಪೂಜಾ ನಾಗರಾಜ್ ವೃತ್ತಿಯಲ್ಲಿ ದಂತವೈದ್ಯೆ. ಅವರ ತಂದೆ ನಾಗರಾಜ್ ಸಿವಿಲ್ ಇಂಜಿನಿಯರ್ ಆಗಿದ್ದು, 2005 ರಲ್ಲಿ ನ್ಯೂಜಿಲೆಂಡ್ಗೆ ಹೋಗಿ ನೆಲೆಸಿದ್ದರು. ಆದರೆ, ಪೂಜಾ ತನ್ನ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ಮುಗಿಸಿಕೊಂಡು, ನಂತರ ನ್ಯೂಜಿಲೆಂಡ್ಗೆ ಭೇಟಿ ನೀಡಿದಾಗ ಕ್ಯಾಂಬೆಲ್ ವಿಲ್ ವರ್ಥ್ ಅವರ ಪರಿಚಯ ಆಗಿ ಅದು ಪ್ರೀತಿಗೆ ತಿರುಗಿದೆ.
ಕ್ಯಾಂಬೆಲ್ ವಿಲ್ ವರ್ಥ್ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ನ್ಯೂಜಿಲೆಂಡ್ನಲ್ಲಿ ನೆಲೆಸಿದ್ದಾರೆ. ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ವಿವಾಹ ಸಮಾರಂಭವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಭವ್ಯವಾಗಿ ನಡೆಯಿತು. ಪೂಜಾ ಮತ್ತು ಕ್ಯಾಂಬೆಲ್ ವಿಲ್ ವರ್ಥ್ ಇಬ್ಬರೂ ತಮ್ಮ ಹೊಸ ಜೀವನವನ್ನು ಸಂತೋಷದಿಂದ ಆರಂಭಿಸಿದ್ದಾರೆ. ಕುಟುಂಬಗಳು, ಸ್ನೇಹಿತರು ಮತ್ತು ಹತ್ತಿರದ ಬಂಧುಗಳು ವಿವಾಹದಲ್ಲಿ ಪಾಲ್ಗೊಂಡು ಹೊಸ ಜೋಡಿಗೆ ಶುಭಕೋರಿದರು.



