ಬೆಂಗಳೂರು: ಬೆಂಗಳೂರಿನ ಬಾಗಲಗುಂಟೆಯಲ್ಲಿ ಮದುವೆಯಾಗಿ ಇನ್ನು ಒಂದು ತಿಂಗಳು ಕಳೆದಿಲ್ಲ, ಆಗಲೇ ನವವಿವಾಹಿತೆ ಸಾವಿನ ಮನೆಯ ಬಾಗಿಲು ತಟ್ಟಿರುವ ಘಟನೆ ಜರುಗಿದೆ.
ಐಶ್ವರ್ಯ ಸಿಕೆ ಮೃತ ನವವಿವಾಹಿತೆ. ಇವರು ಮದ್ದೂರು ಮೂಲದವರು ಎನ್ನಲಾಗಿದೆ. ಐಶ್ವರ್ಯ ನ.27ರಂದು ಬೆಂಗಳೂರು ಮಲ್ಲಸಂದ್ರದ ಲಿಖಿತ್ ಸಿಂಹ ಜೊತೆಗೆ ಹಸಮಣೆ ಏರಿದ್ದಳು. ಮದುವೆಯಾಗಿದ್ದಾಗಿನಿಂದ ಗಂಡ ಹೆಂಡತಿ ಅತ್ತೆಯ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಐಶ್ವರ್ಯ ಪತಿ ನಿಮ್ಮ ಮಗಳನ್ನ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದನಂತೆ. ಬುಧವಾರ ಬೆಳಗ್ಗೆಯಷ್ಟೇ ಮೃತಳ ಪೋಷಕರು ಗಂಡನ ಮನೆಗೆ ಬಂದು ರಾಜಿ ಸಂಧಾನ ಮಾಡಿಸಿ ಊರಿನ ಕಡೆಗೆ ಹೊರಟಿದ್ದರು. ಇತ್ತ ಪೋಷಕರು ಊರು ಸೇರುತ್ತಿದ್ದಂತೆ ಐಶ್ವರ್ಯ ನೇಣು ಹಾಕಿಕೊಂಡು ಸತ್ತಿದ್ದಾಳೆ ಎಂದು ಗಂಡನ ಮನೆಯವರು ಮಾಹಿತಿ ನೀಡಿದ್ದಾರೆ.
ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಗೆ ಮೃತಳ ಪೋಷಕರು ದೂರು ನೀಡಿದ್ದಾರೆ. ದೂರಿನ ಅನ್ವಯ ಪೋಲೀಸರು ತನಿಖೆ ಕೈಗೊಂಡಿದ್ದಾರೆ.



