ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಕೊಡ ಮಾಡುವ ರಾಜ್ಯಮಟ್ಟದ ಹೆಚ್ ಎನ್ ಪ್ರಶಸ್ತಿ ಹಾಗೂ ಚೈತನ್ಯ ಶ್ರೀ ಪ್ರಶಸ್ತಿಗೆ ಗದಗ ಜಿಲ್ಲೆಯ ಇಬ್ಬರು ಸೇವಾ ಸಾಧಕರು ಆಯ್ಕೆಯಾಗಿದ್ದಾರೆ.
ಇದೇ ತಿಂಗಳ ಡಿಸೆಂಬರ್ 28, 29 ಹಾಗೂ 30ರಂದು ಯಾದಗಿರಿ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಐದನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಡಾ. ಮಂಜುನಾಥ್ ಮಳಿಗಿಯವರು ಎಚ್. ನರಸಿಂಹಯ್ಯನವರ ಹೆಸರಿನಲ್ಲಿ ಕೊಡ ಮಾಡುವ ಹೆಚ್ ಎನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವೃತ್ತಿಯಿಂದ ವೈದ್ಯರಾಗಿ ಸಮಾಜಮುಖಿ ಸೇವೆ ಸಲ್ಲಿಸಿದ ಇವರು ಸಮಾಜದ ಹಲವು ಆಯಾಮಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಶ್ರೀಮತಿ ನಿರ್ಮಲಾ ಗಂಗಾಧರ ಅರಳಿಯವರು ರಾಜ್ಯಮಟ್ಟದ ಚೈತನ್ಯ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶರಣ ತತ್ವ ಚಿಂತನೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಲಕ್ಷ್ಮೇಶ್ವರ ತಾಲೂಕಿನ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಸಂಘಟನಾತ್ಮಕ ಕಾರ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಇನ್ನರ್ ವಿಲ್ ಕ್ಲಬ್‌ನ ಸದಸ್ಯರಾಗಿ, ಸಿದ್ದೇಶ್ವರ ಸತ್ಸಂಗ ಬಳಗ, ರಾಜರಾಜೇಶ್ವರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರ ಸಾರಥ್ಯದಲ್ಲಿ ನಡೆಯುವ ಈ ಸಮ್ಮೇಳನವು ವೈಚಾರಿಕ ಚಿಂತನೆಗಳ ವೇದಿಕೆಯಾಗಿದೆ. ಮೂಢನಂಬಿಕೆಗಳನ್ನು ಮೆಟ್ಟಿನಿಂತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಲ್ಲಿ ಮಕ್ಕಳು, ಯುವಕರು ಹಾಗೂ ಸಮಾಜದ ಪ್ರತಿಯೊಬ್ಬ ಪ್ರಜೆಗೆ ಅರಿವು ಮೂಡಿಸುವ ಸಮ್ಮೇಳನವಾಗಿದೆ.
ಪರಿಷತ್ತಿನ ರಾಜ್ಯಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಹಾಗೂ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಪ್ರಶಸ್ತಿಗೆ ಆಯ್ಕೆಯಾದ ಮಹನೀಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗದಗ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಬಣಕಾರ್ ಅವರು ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ.



