ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಇನ್ನರ್ ವ್ಹೀಲ್ ಕ್ಲಬ್ 317ರ ಜಿಲ್ಲಾ ಚೇರಮನ್ ಆಗಿದ್ದು, ಇವರು ತಾಯಿಯ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಶಿಸ್ತುಬದ್ಧ ಜೀವನದ ಅಡಿಪಾಯದಲ್ಲಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿದ್ದಾರೆ. ಐದು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿ ವಿಜಯಮಾಲಾ ರಾಮರಾವ್ ಹಲಗೇಕರ ಅವರ ಆರೈಕೆಯಲ್ಲಿ ಬೆಳೆದಿದ್ದಾರೆ. ಕೊಲ್ಲಾಪುರದಲ್ಲಿ ಹುಟ್ಟಿ ಬೆಳಗಾವಿಯಲ್ಲಿ ಬೆಳೆದ ಇವರು, ಸೇಂಟ್ ಜೋಸೆಫ್ ಕಾಲೇಜ್‌ನಲ್ಲಿ ಶಿಕ್ಷಣವನ್ನು ಪಡೆದು, ಮರಾಠ ಮಂಡಲ ಪಾಲಿಟೆಕ್ನಿಕ್ ಕಾಲೇಜಿನಿಂದ ಎಲೆಕ್ಟ್ರಾನಿಕ್ ಮತ್ತು ದೂರ ಸಂಪರ್ಕ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿದ್ದಾರೆ.
ಬಾಲ್ಯದಿಂದಲೇ ಉತ್ತಮ ಕ್ರೀಡಾಪಟುವಾಗಿದ್ದು, ಶಾರ್ಟ್ ಪುಟ್, ಡಿಸ್ಕಸ್ ಥ್ರೋ, ಜಾವೆಲಿನ್ ಥ್ರೋ ಮುಂತಾದ ಆಟಗಳಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿರಂತರವಾಗಿ ಮೂರು ವರ್ಷಗಳ ಕಾಲ ಫುಟ್ಬಾಲ್ ಹಾಗೂ ಥ್ರೋ ಬಾಲ್ ತಂಡದ ನಾಯಕಿಯಾಗಿದ್ದು, ಬಾಲ್ಯದಿಂದಲೇ ಉತ್ಸಾಹಭರಿತವಾದ ಮತ್ತು ಕ್ರಿಯಾಶೀಲ ಬದುಕನ್ನು ಕಳೆದಿದ್ದಾರೆ.
ಪ್ರಸ್ತುತ ಮಾರ್ವೆಲಸ್ ಗ್ರೂಪ್ ಆಫ್ ಕಂಪೆನಿಗಳ ಮುಖ್ಯ ಪ್ರವರ್ತಕರಲ್ಲಿ ಒಬ್ಬರಾಗಿದ್ದು, ಮಾನವ ಸಂಪನ್ಮೂಲ ಮತ್ತು ಆಡಳಿತ ನಿರ್ದೇಶಕಿಯಾಗಿ ಗುಂಪನ್ನು ಮುನ್ನಡೆಸುತ್ತಿದ್ದಾರೆ. ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಅವರ ಶಿಸ್ತುಬದ್ಧ ಬೆಂಬಲದೊಂದಿಗೆ ಮಾರ್ವೆಲಸ್ ಗ್ರೂಪ್ ಈಗ ಶ್ರೇಷ್ಠತೆ ಮತ್ತು ಯಶಸ್ಸಿನ ಹೊಸ ಶಿಖರವನ್ನು ತಲುಪಿದೆ.
2002ರಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ್ನು ಪ್ರವೇಶಿಸಿದ ಇವರು, 2016-17ರಲ್ಲಿ ಕೊಲ್ಲಾಪುರ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು. ಈ ಅವಧಿಯಲ್ಲಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, ಅವುಗಳಲ್ಲಿ ಹ್ಯಾಪಿ ಸ್ಕೂಲ್ ಯೋಜನೆ ತುಂಬಾ ಮೆಚ್ಚುಗೆಯನ್ನು ಪಡೆದಿದೆ. 2017-18ರಲ್ಲಿ ಜಿಲ್ಲಾ ವಲಯದ ಸಾಕ್ಷರತಾ ಕ್ಲಬ್ ಸಂಯೋಜಕರಾಗಿದ್ದ ಇವರು ಜಿಲ್ಲಾ ಸಂಪಾದಕಿಯಾಗಿ ಕರೋನಾ ಸಮಯದಲ್ಲಿ ಕೈಗೊಂಡ ಕಾರ್ಯಗಳು, ಜಿಲ್ಲಾ ಐಎಸ್‌ಓ ಆದಾಗ ಮಕ್ಕಳು ಮತ್ತು ಮಾನಸಿಕ ಅಸ್ವಸ್ಥ ಮಹಿಳೆಯರಿಗಾಗಿ ಕೈಗೊಂಡ ಕಾರ್ಯಗಳು, ಕೊಲ್ಲಾಪುರದ ಜಿಲ್ಲಾ ಸಮ್ಮೇಳನದ ಅಂಗವಾಗಿ ಜಿಲ್ಲಾ ಆಸ್ಪತ್ರೆಗೆ ಇ- ಅಂಬ್ಯುಲೆನ್ಸ್ ನೀಡಿದ್ದು, ಜಿಲ್ಲಾ ಇಎಸ್‌ಓ ಆದಾಗ ಜೈಪುರ ಪಾದಯಾತ್ರೆ ಯೋಜನೆಗೆ 1 ಲಕ್ಷ ರೂ ನೀಡಿದ್ದು, ಜಿಲ್ಲಾ ಉಪಾಧ್ಯಕ್ಷರಾದಾಗ 25 ವ್ಹೀಲ್ ಚೇರ್‌ಗಳನ್ನು ನೀಡಿದ್ದು ಹೀಗೆ ಇವರು ಕೈಗೊಂಡ ಅನೇಕ ಕಾರ್ಯಗಳು ಶ್ಲಾಘನೀಯವಾಗಿವೆ.
ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3170ಗೆ ಪ್ರವೇಶಿಸಿದ ಮೊದಲ ಮಹಿಳೆಯಾದ ಇವರು ಅಲ್ಲಿಯೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆ ಮತ್ತು ಕೆಲಸಗಳನ್ನು ಗುರುತಿಸಿ ಇವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಸಾಮಾಜಿಕ ಕೊಡುಗೆಗಳಿಗಾಗಿ ಸಿಎಸ್‌ಐಬಿಆರ್ ಮ್ಯಾನೇಜ್ಮೆಂಟ್ ಕಂಪನಿಯಿಂದ ಕಿಂಗ್ ಮೇಕರ್' ಪ್ರಶಸ್ತಿ, ಕೊಲ್ಲಾಪುರದ ಪ್ರೆಸ್ ಕೌನ್ಸಿಲ್‌ನಿಂದ ಸನ್ಮಾನ್ ಕರ್ತುತ್ವಾಚ’ ಪ್ರಶಸ್ತಿ, ಐಟಿಐ ಇಂಜಿನಿಯರಿಂಗ್ ಕೌನ್ಸಿಲ್‌ನಿಂದ ಬೆಸ್ಟ್ ಬಿಸಿನೆಸ್ ವುಮೆನ್' ಪ್ರಶಸ್ತಿ, ಸ್ಪೀಡ್ ನ್ಯೂಸ್ ಲೈವ್ 24ದಿಂದ ಐಕಾನ್ ವಿಮೆನ್-2020′ ಪ್ರಶಸ್ತಿ, ರೇಡಿಯೋ ಸಿಟಿ 95 ಎಫ್‌ಎಂದಿಂದ ನಾರಿ ಸನ್ಮಾನ-2020' ಪ್ರಶಸ್ತಿ, ಮಹಾರಾಷ್ಟ್ರ ಇಂಡಸ್ಟ್ರಿಯಲ್ ಸಂಸ್ಥೆಯಿ**ಂದ** ಮಹಿಳಾ ವಿಭಾಗದಲ್ಲಿ ಪ್ರೈಡ್ ಆಫ್ ಮಹಾರಾಷ್ಟ್ರ ಅವಾರ್ಡ್-2021′ ಪ್ರಶಸ್ತಿ, ಅಖಿಲ ಭಾರತ ಮಹಿಳಾ ಮರಾಠಾ ಮಂಡಲದಿಂದ ತೇಜಸ್ವಿನಿ ಪುರಸ್ಕಾರ', ಚೇತನ್ ವಿಕಾಸ್ ಸ್ಕೂಲ್ ಆಫ್ ಕೊಲ್ಲಾಪುರದಿಂದ 'ಆದರ್ಶ ಪಾಲಕ' ಪ್ರಶಸ್ತಿ, ಮೌಂಟ್ ಅಬುದಲ್ಲಿ ನಡೆದ ಬ್ರಹ್ಮಕುಮಾರಿ ಶಿವ ಶಕ್ತಿ ನಾಯಕತ್ವ ವಿಧಾನ ವಿಚಾರ ಸಂಕೀರಣದಲ್ಲಿ ಶಿವಶಕ್ತಿ ನಾಯಕತ್ವ’ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.
ಇನ್ನರ್‌ವ್ಹೀಲ್ ಕ್ಲಬ್ ಅಲ್ಲದೇ ದ ನ್ಯೂ ಎಜ್ಯುಕೇಶನ್ ಸೊಸೈಟಿಯ ಸದಸ್ಯರಾಗಿ, ಪ್ರಿನ್ಸೆಸ್ ಪದ್ಮರಾಜೆ ಬಾಲಕಿಯರ ಶಾಲೆ ಮತ್ತು ಕಾಲೇಜಿನ ಅಧ್ಯಕ್ಷರಾಗಿ, ಕೊಲ್ಲಾಪುರದ ಮಾತೃಶ್ರೀ ವೃದ್ಧಾಶ್ರಮದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅಷ್ಟೇ ಅಲ್ಲದೆ ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ಯಶಸ್ಸಿನ ಹಿಂದೆ ಹೋರಾಟದ ಒಂದು ಕಾಣದ ಅಧ್ಯಾಯವಿರುತ್ತದೆ. ಮಿತಿಯನ್ನು ಪರೀಕ್ಷಿಸುವ ಅನೇಕ ಸವಾಲುಗಳನ್ನು ಎದುರಿಸಿ ಸಾಧಿಸಿದ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿರುತ್ತದೆ. ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಅವರ ಪಯಣವು ಇಂತಹ ಒಂದು ಸಾಧನೆಗೆ ಮಾದರಿಯಾಗಿದೆ. ಜಿಲ್ಲಾ 317 ಚೇರಮನ್‌ರಾದ ಉತ್ಕರ್ಷಾ ಸಂಗ್ರಾಮ್ ಪಾಟೀಲ್ ಇವರಿಗೆ ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಸ್ವಾಗತವನ್ನು ಕೋರುತ್ತೇವೆ.
-
ವೀಣಾ ಕಾವೇರಿ.
ಸಂಪಾದಕರು,
ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ.



