ಚಳಿಗಾಲದ ಶೀತ ವಾತಾವರಣದಲ್ಲಿ ತ್ವಚೆ ಸಂಬಂಧಿ ಸಮಸ್ಯೆಗಳ ಜೊತೆಗೆ ಶೀತ, ಕೆಮ್ಮು, ನೆಗಡಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ.
ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇಕರು ಕಷಾಯ, ಆರೋಗ್ಯಕರ ಆಹಾರಗಳನ್ನು ಸೇವಿಸುತ್ತಾರೆ. ಇದರ ಜೊತೆಗೆ, ಚಳಿಗಾಲದಲ್ಲಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸುವುದೂ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಜೇನುತುಪ್ಪವನ್ನು ಚಳಿಗಾಲದಲ್ಲಿ ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ದೊರೆಯುವ ಲಾಭಗಳು ಹೀಗಿವೆ.
ಉತ್ತಮ ನಿದ್ರೆ:
ಜೇನುತುಪ್ಪದಲ್ಲಿ ಇರುವ ಗ್ಲೂಕೋಸ್ ಅಂಶ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲದ ಉತ್ಪಾದನೆ ಹೆಚ್ಚಾಗಿ, ಅದು ಸಿರೊಟೋನಿನ್ ಹಾಗೂ ಮೆಲಟೋನಿನ್ ಆಗಿ ಪರಿವರ್ತನೆಯಾಗುತ್ತದೆ. ಈ ಎರಡೂ ಅಂಶಗಳು ನಿದ್ರೆಯನ್ನು ಸುಧಾರಿಸಲು ಸಹಕಾರಿ. ಹೀಗಾಗಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ಉತ್ತಮ ನಿದ್ರೆ ಪಡೆಯಲು ಸಾಧ್ಯ.
ರೋಗನಿರೋಧಕ ಶಕ್ತಿ ಹೆಚ್ಚಳ:
ಜೇನುತುಪ್ಪವು ನೈಸರ್ಗಿಕ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ ವೈರಲ್ ಗುಣಗಳನ್ನು ಹೊಂದಿದೆ. ಇದಲ್ಲದೆ ವಿಟಮಿನ್ ಸಿ ಮತ್ತು ಸತುವಿನ ಅಂಶವೂ ಇದರಲ್ಲಿ ಇದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಶೀತ, ಕೆಮ್ಮು ಹಾಗೂ ಜ್ವರದ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ಗಂಟಲು ನೋವಿನಿಂದ ಪರಿಹಾರ:
ಚಳಿಗಾಲದಲ್ಲಿ ಗಂಟಲು ನೋವು ಹಾಗೂ ಕೆಮ್ಮು ಸಾಮಾನ್ಯ. ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್ ಜೇನುತುಪ್ಪ ಸೇವಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ ಮತ್ತು ಕೆಮ್ಮಿಗೆ ಪರಿಹಾರ ದೊರೆಯುತ್ತದೆ. ಜೇನುತುಪ್ಪದಲ್ಲಿರುವ ಹೈಡ್ರೋಜನ್ ಪೆರಾಕ್ಸೈಡ್ ಅಂಶ ದೇಹವನ್ನು ಸೋಂಕುಗಳ ವಿರುದ್ಧ ರಕ್ಷಿಸಲು ಸಹಕಾರಿ.
ಹೊಳೆಯುವ ಚರ್ಮ:
ಜೇನುತುಪ್ಪದಲ್ಲಿ ವಿಟಮಿನ್ ಇ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಿ ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಜೇನುತುಪ್ಪದ ಸೇವನೆಯಿಂದ ಕಾಲಜನ್ ಉತ್ಪಾದನೆ ಹೆಚ್ಚಾಗಿ, ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ. ಇದರಿಂದ ವಯಸ್ಸಿನ ಗುರುತುಗಳು ನಿಧಾನಗೊಳ್ಳುತ್ತವೆ.
ಹೃದಯದ ಆರೋಗ್ಯ ಸುಧಾರಣೆ:
ಜೇನುತುಪ್ಪದಲ್ಲಿ ಇರುವ ಫ್ಲೇವನಾಯ್ಡ್‌ಗಳು ಹಾಗೂ ಫೀನಾಲಿಕ್ ಸಂಯುಕ್ತಗಳು ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವು ರಕ್ತನಾಳಗಳನ್ನು ಆರೋಗ್ಯಕರವಾಗಿ ಕಾಪಾಡಲು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಿರುವುದರಿಂದ ಜೇನುತುಪ್ಪದ ಸೇವನೆ ರಕ್ತದೊತ್ತಡ ನಿಯಂತ್ರಣಕ್ಕೂ ನೆರವಾಗುತ್ತದೆ.
ಯಾರು ಜೇನುತುಪ್ಪ ಸೇವಿಸಬಾರದು?
ಜೇನುತುಪ್ಪ ಆರೋಗ್ಯಕ್ಕೆ ಲಾಭದಾಯಕವಾದರೂ, ಕೆಲವರು ಎಚ್ಚರಿಕೆ ವಹಿಸಬೇಕು. ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡಬಾರದು. ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚುವ ಸಾಧ್ಯತೆ ಇರುವುದರಿಂದ ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು.
ಜೊತೆಗೆ ಜೇನುತುಪ್ಪಕ್ಕೆ ಅಲರ್ಜಿ ಇರುವವರು ಇದರ ಸೇವನೆಯನ್ನು ತಪ್ಪಿಸುವುದು ಉತ್ತಮ. ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆದು ಜೇನುತುಪ್ಪವನ್ನು ಸೇವಿಸುವುದು ಸೂಕ್ತ.



