ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ನಡುವೆಯೇ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಶಾಕ್ ನೀಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ವಿದ್ಯುತ್ ಬಳಕೆಗೆ ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆದರೆ ಇದನ್ನು ನೇರವಾಗಿ ‘ವಿದ್ಯುತ್ ದರ ಪರಿಷ್ಕರಣೆ’ ಎಂದು ಕರೆಯದೆ, “ಟಾಪ್-ಅಪ್” ಅಥವಾ “ಟ್ರೂ-ಅಪ್” ಎಂದು ಕರೆಯಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಮಾರ್ಚ್ 2025ರಲ್ಲಿ ವಿದ್ಯುತ್ ದರ ಪರಿಷ್ಕರಣೆ ಘೋಷಿಸಿದ್ದ ಕೆಇಆರ್‌ಸಿ, ಮೂರು ವರ್ಷಗಳ ಕಾಲ ದರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತ್ತು. ಆದರೆ ಮಾರುಕಟ್ಟೆಯ ಏರಿಳಿತಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂಗಳು) ಬಾಕಿ ಮೊತ್ತವನ್ನು ಪರಿಗಣಿಸಿ ಇದೀಗ ವರ್ಷಕ್ಕೊಮ್ಮೆ ಸಣ್ಣ ಪ್ರಮಾಣದ ತಿದ್ದುಪಡಿ ಮಾಡಲಾಗುತ್ತಿದೆ. ಇದನ್ನೇ ‘ಟಾಪ್-ಅಪ್’ ಎಂದು ಕರೆಯಲಾಗುತ್ತದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯಂತೆ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದ್ದು, ಮಧ್ಯಂತರದಲ್ಲಿ ಟಾಪ್-ಅಪ್ ಜಾರಿಯಾಗಲಿದೆ. ಈ ಟಾಪ್-ಅಪ್ ಎಲ್ಲಾ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದ್ದು, ಪ್ರತಿ ಯೂನಿಟ್‌ಗೆ ಗರಿಷ್ಠ 8ರಿಂದ 10 ಪೈಸೆವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಕೃಷಿ ವಿದ್ಯುತ್ ಸಬ್ಸಿಡಿ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ, ಅದರ ಮೊತ್ತವನ್ನು ಕಡಿಮೆ ಮಾಡುವ ಕುರಿತು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ತಮ್ಮ ಲೆಕ್ಕಾಚಾರವನ್ನು ಪರಿಷ್ಕರಿಸಿ, ಪ್ರತಿ ಯೂನಿಟ್‌ಗೆ 8.3 ರೂಪಾಯಿದ್ದ ಕೃಷಿ ಸಬ್ಸಿಡಿಯನ್ನು 7.7 ರೂಪಾಯಿಗೆ ಇಳಿಸುವಂತೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2025–26 ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಬೆಲೆ ಸ್ಥಿರವಾಗಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿರಂತರವಾಗಿ ಕಲ್ಲಿದ್ದಲು ಪೂರೈಕೆ ಲಭ್ಯವಾಗಿರುವುದರಿಂದ ಆಮದು ಕಲ್ಲಿದ್ದಲಿನ ಅವಶ್ಯಕತೆ ಕಡಿಮೆಯಾಗಿದೆ. ಜೊತೆಗೆ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ವೆಚ್ಚಗಳಲ್ಲಿ ಬದಲಾವಣೆ ಕಂಡುಬಂದಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬಂದರೂ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಬೇಕಿರುವುದರಿಂದ ದರದಲ್ಲಿ ಕಡಿತ ಸಾಧ್ಯವಿಲ್ಲ. ಈ ಕಾರಣದಿಂದಾಗಿ ಈ ವರ್ಷವೂ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿದ್ದು, ಇದನ್ನು ‘ದರ ಪರಿಷ್ಕರಣೆ’ ಎನ್ನದೆ ‘ಟಾಪ್-ಅಪ್’ ಎಂದು ಪರಿಗಣಿಸಲಾಗುತ್ತದೆ ಎಂದು ಕೆಇಆರ್‌ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



