ಬೆಂಗಳೂರು: “ಕೇರಳ ಸಿಎಂ, ಕೇರಳ ಸರಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆಯೇ ಹೊರತು, ಕೇರಳಿಗರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ರಾಜೀವ್ ಚಂದ್ರಶೇಖರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೇರಳದ ಜನರು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಕೇರಳ ಜನ ನನ್ನನ್ನು ಬಹಳ ಪ್ರೀತಿಸುತ್ತಾರೆ.
ನನಗೂ ಅವರ ಮೇಲೆ ಗೌರವವಿದೆ. ಕೇರಳ ಚುನಾವಣೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಅಲ್ಲಿ ನಮ್ಮ ಸರ್ಕಾರ ಬರಲಿದೆ. ಹೀಗಾಗಿ ಬಿಜೆಪಿಯವರು ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಅವರು ಈ ರೀತಿ ಹುಳಿ ಹಿಂಡುವುದು ಬೇಡ. ನಮ್ಮ ಪಕ್ಷದ ನಾಯಕರು ನಮಗೆ ಸಲಹೆ ನೀಡಿದ್ದು, ನಾವು ಅದನ್ನು ಸ್ವೀಕರಿಸುತ್ತೇವೆ” ಎಂದು ತಿಳಿಸಿದರು.



