ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿದ ಭಾವಸಾರ ವ್ಹಿಜನ್ ಇಂಡಿಯಾದ 25ನೇ ವರ್ಷದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಗದುಗಿನ ರಕ್ತ ತಪಾಸಕ ಡಾ. ದತ್ತಾತ್ರೇಯ ವೈಕುಂಠೆ ಅವರು ಅತ್ಯಧಿಕ ಉಚಿತ ರಕ್ತತಪಾಸಣಾ ಶಿಬಿರಗಳನ್ನು ಕೈಗೊಂಡಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾವಸಾರ ವ್ಹಿಜನ್ ಇಂಡಿಯಾದ ಸಂಸ್ಥಾಪಕ ನಾರಾಯಣರಾವ್ ತಾತುಸ್ಕರ್ ಮಾತನಾಡಿ, ಗದುಗಿನ ಡಾ. ದತ್ತಾತ್ರೇಯ ವೈಕುಂಠೆ ಅವರು ಕಳೆದ 12 ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ವಿವಿಧೆಡೆ ಸುಮಾರು 400ಕ್ಕೂ ಹೆಚ್ಚು ಉಚಿತ ರಕ್ತತಪಾಸಣಾ ಶಿಬಿರ ನಡೆಸಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಜನರನ್ನು ತಪಾಸಣೆ ಒಳಪಡಿಸಿದ್ದಲ್ಲದೆ, 65 ಸಲ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ ಎಂದರು.
ಇಂತಹ ಮಹನೀಯರು ನಮ್ಮ ಭಾವಸಾರ ವ್ಹಿಜನ್ ಮೂಲಕ ಉಚಿತ ರಕ್ತತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಬೆಂಗಳೂರಿನಲ್ಲಿ ನಡೆದ ವ್ಹಿಜನ್‌ನ ಬೆಳ್ಳಿ ಹಬ್ಬದ ಕಾರ್ಯಕ್ರಮದ ಸಂದರ್ಭದಲ್ಲೂ ಸಹ ಶಿಬಿರ ನಡೆಸಿ 120ಕ್ಕೂ ಹೆಚ್ಚು ಜನರಿಗೆ ಉಚಿತ ರಕ್ತ ತಪಾಸಣೆ, ರಕ್ತಗುಂಪು ಪರೀಕ್ಷೆ ನಡೆಸಿದ್ದು 2026ರಲ್ಲಿ ಸಿಕಂದರಾಬಾದ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲೂ ಸಹ ಈ ರೀತಿಯ ವಿಶೇಷ ಶಿಬಿರ ಜರುಗಿಸಲು ಏರ್ಪಾಡು ಮಾಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯಲಕ್ಷ್ಮೀ ತ್ರಿಮಲ್ಲೆ ಅವರನ್ನೂ ಗೌರವಿಸಲಾಯಿತು. ವ್ಹಿಜನ್‌ನ ರಾಷ್ಟ್ರೀಯ ಅಧ್ಯಕ್ಷ ಜೆ.ಆರ್. ಬಾಲಕೃಷ್ಣ, ಕಾರ್ಯದರ್ಶಿ ಯೋಗೇಶ ಸಾಕರೆ, ಚೇರಮನ್ ಗಜೇಂದ್ರನಾಥ ಮಾಳೋದೆ ಮುಂತಾದವರಿದ್ದರು.



