ಮಲಯಾಳಂ ಚಿತ್ರರಂಗದ ಲೆಜೆಂಡ್ ನಟ ಮೋಹನ್ಲಾಲ್ ಅವರ ಜೀವನದಲ್ಲಿ ದುಃಖದ ಘಟನೆ ಸಂಭವಿಸಿದೆ. ಅವರ ತಾಯಿ ಶಾಂತಕುಮಾರಿ ಅವರು ಮಂಗಳವಾರ (ಡಿಸೆಂಬರ್ 30) ಎರ್ನಾಕುಲಂ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಶಾಂತಕುಮಾರಿ ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ದಶಕದಿಂದ ಹಾಸಿಗೆ ಹಿಡಿದ ಸ್ಥಿತಿಯಲ್ಲೇ ಜೀವನ ನಡೆಸುತ್ತಿದ್ದರು. ಸ್ಟ್ರೋಕ್ ನಂತರ ಅವರನ್ನು ತಿರುವನಂತಪುರಂನಿಂದ ಕೊಚ್ಚಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ನಿರಂತರ ಚಿಕಿತ್ಸೆ ನಡೆಯುತ್ತಿತ್ತು.
ತಾಯಿ ನಿಧನದ ಸಂದರ್ಭದಲ್ಲಿ ಮೋಹನ್ಲಾಲ್ ಅವರು ಚಿತ್ರೀಕರಣದ ಕಾರಣ ಮನೆಯಲ್ಲಿರಲಿಲ್ಲ. ಸುದ್ದಿ ತಿಳಿದ ತಕ್ಷಣವೇ ಅವರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಕೊಚ್ಚಿಗೆ ವಾಪಸ್ಸಾದರು. ಈ ದುಃಖದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಹಲವರು ಮೋಹನ್ಲಾಲ್ ಮನೆಗೆ ಆಗಮಿಸಿ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ.
ಖ್ಯಾತ ನಟ ಮಮ್ಮುಟಿ ಅವರು ಶಾಂತಕುಮಾರಿ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೋಹನ್ಲಾಲ್ ಹಾಗೂ ಕುಟುಂಬಕ್ಕೆ ಸಾಂತ್ವನ ಸಂದೇಶಗಳನ್ನು ಹರಿಸುತ್ತಿದ್ದಾರೆ.
ಮೋಹನ್ಲಾಲ್ ಅವರ ವೃತ್ತಿಜೀವನದ ಯಶಸ್ಸಿನ ಹಿಂದೆ ತಾಯಿ ಶಾಂತಕುಮಾರಿ ಅವರ ಬೆಂಬಲ ಪ್ರಮುಖವಾಗಿತ್ತು. ಈ ವರ್ಷ ದೊರೆತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮೋಹನ್ಲಾಲ್ ಅವರ ಬದುಕಿನ ದೊಡ್ಡ ಗೌರವವಾಗಿತ್ತು. ಪ್ರಶಸ್ತಿ ಪಡೆದ ಬಳಿಕ ತಾಯಿಯನ್ನು ಭೇಟಿಯಾದ ಕ್ಷಣವನ್ನು ಅವರು ಅತ್ಯಂತ ವಿಶೇಷವಾಗಿ ನೋಡಿದ್ದರು.
ಶಾಂತಕುಮಾರಿ ಅವರ ಪತಿ ವಿಶ್ವನಾಥ್ ನಾಯರ್ ಅವರು ಈಗಾಗಲೇ ನಿಧನರಾಗಿದ್ದು, ಕುಟುಂಬದಲ್ಲಿ ಈ ಹಿಂದೆ ಕೂಡ ನೋವಿನ ಘಟನೆಗಳು ನಡೆದಿವೆ. ಆದರೂ ಕೂಡ ಮೋಹನ್ಲಾಲ್ ಅವರು ಕುಟುಂಬದ ಜೊತೆಗೆ ಸದಾ ನಿಂತು, ತಾಯಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.



