ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಬ್ಯಾಟಲ್ ಆಫ್ ಗಲ್ವಾನ್’ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎದ್ದಿದೆ. ಸಿನಿಮಾದಲ್ಲಿರುವ ಗಲ್ವಾನ್ ಕಣಿವೆ ಘರ್ಷಣೆಯ ದೃಶ್ಯಗಳಿಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜೂನ್ 2020ರಲ್ಲಿ ನಡೆದ ಗಲ್ವಾನ್ ಘರ್ಷಣೆಯ ಚಿತ್ರಣವು ವಾಸ್ತವ ಘಟನೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಚೀನಾ ಆರೋಪಿಸಿದೆ. ಗಲ್ವಾನ್ ಕಣಿವೆ ಎಲ್‌ಎಸಿ ವ್ಯಾಪ್ತಿಯಲ್ಲಿ ಚೀನಾದ ಭಾಗದಲ್ಲಿದೆ. ಭಾರತೀಯ ಸೈನಿಕರು ಗಡಿ ದಾಟಿ ಪ್ರಚೋದನೆ ನೀಡಿದ ಕಾರಣವೇ ಘರ್ಷಣೆಗೆ ಕಾರಣ ಎಂದು ಚೀನಾ ಹೇಳಿಕೊಂಡಿದೆ.
ಚೀನಾದ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಸಿನಿಮಾ ನಿರ್ಮಾಣವು ಕಲಾವಿದರ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು, ಸಿನಿಮಾ ತಯಾರಕರು ತಮ್ಮ ದೃಷ್ಟಿಕೋನದಂತೆ ಚಿತ್ರ ನಿರ್ಮಿಸಬಹುದು ಎಂದು ಹೇಳಿದೆ.
ಇದಲ್ಲದೆ, ಈ ಸಿನಿಮಾದೊಂದಿಗೆ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೂ ಯಾರಿಗಾದರೂ ಆಕ್ಷೇಪಣೆ ಇದ್ದರೆ ಸರ್ಕಾರವನ್ನು ಸಂಪರ್ಕಿಸಬಹುದು. ಅಗತ್ಯವಾದ ಸ್ಪಷ್ಟನೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಬಿಕ್ಕುಮಳ್ಳ ಸಂತೋಷ್ ಬಾಬು ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಸೇನೆಯ ಶೌರ್ಯವನ್ನು ಆಧರಿಸಿರುವ ಈ ಸಿನಿಮಾ 2026ರ ಏಪ್ರಿಲ್ 17ರಂದು ತೆರೆಕಾಣಲಿದೆ.



