ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಪ್ರಕರಣ ಇದೀಗ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರೂ, ಪೊಲೀಸರಿಂದ ಯಾವುದೇ ಕ್ರಮವಾಗಿಲ್ಲ ಎಂಬ ಆರೋಪವನ್ನು ವಿಜಯಲಕ್ಷ್ಮಿ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಬೇಸರ ಹಂಚಿಕೊಂಡಿರುವ ವಿಜಯಲಕ್ಷ್ಮಿ,
“ನಾನು ದಾಖಲಿಸಿದ ದೂರು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಆದರೆ ಮತ್ತೊಬ್ಬ ಮಹಿಳೆಯ ದೂರಿನ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬುದು ನನಗೆ ಅಚ್ಚರಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.
ತಮ್ಮ ದೂರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿರುವ ಅವರು,
“ನನ್ನ ವಕೀಲರಿಂದ ನಿರಂತರವಾಗಿ ವಿಚಾರಿಸಿದರೂ ಯಾವುದೇ ಪ್ರಗತಿ ಇಲ್ಲ. ಇಂದು ವೈಯಕ್ತಿಕವಾಗಿ ಹೋಗಿ ಮತ್ತೆ ನೆನಪಿಸಬೇಕಾಯಿತು. ಈ ವಿಳಂಬವು ಯಾವುದೇ ಪ್ರಭಾವದಿಂದಾಗಿಲ್ಲ ಎಂದು ನಾನು ಆಶಿಸುತ್ತೇನೆ” ಎಂದು ಹೇಳಿದ್ದಾರೆ.
ನ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡಿರುವ ವಿಜಯಲಕ್ಷ್ಮಿ ದರ್ಶನ್, “ನ್ಯಾಯವು ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು. ಇಂತಹ ವರ್ತನೆಗೆ ಬೆಂಬಲಿಸುವವರು ತಮ್ಮ ಶಕ್ತಿಯನ್ನು ಉತ್ತಮ ದಿಕ್ಕಿನಲ್ಲಿ ಬಳಸಬೇಕು” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಡಿಸೆಂಬರ್ 31ರಂದು ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ತಮ್ಮ ದೂರಿನ ಬಗ್ಗೆ ಪ್ರಶ್ನಿಸಿದರು. ವಕೀಲರ ಜೊತೆ ಆಗಮಿಸಿದ್ದ ಅವರು, ಪೊಲೀಸ್ ಕ್ರಮದ ವಿಳಂಬದ ಬಗ್ಗೆ ಗರಂ ಆಗಿದ್ದಂತೆ ಕಂಡುಬಂದಿತು. ನಂತರ ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.



