ಬೆಳಿಗ್ಗೆ ಎದ್ದ ಕೂಡಲೇ ಅಥವಾ ಸಂಜೆ ಸಮಯದಲ್ಲಿ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಲ್ಲಿ ಸಾಮಾನ್ಯವಾಗಿದೆ. ಆರೋಗ್ಯಕ್ಕೆ ಹಿತಕರವಲ್ಲ ಎಂಬುದು ತಿಳಿದಿದ್ದರೂ ಈ ಅಭ್ಯಾಸವನ್ನು ಬಿಡುವುದು ಕಷ್ಟ. ಕೆಲ ಮನೆಗಳಲ್ಲಿ ದೊಡ್ಡವರಷ್ಟೇ ಅಲ್ಲ, ಮಕ್ಕಳಿಗೂ ಚಹಾ ಅಥವಾ ಕಾಫಿ ನೀಡಲಾಗುತ್ತಿದೆ. ಆದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ಅಪಾಯಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಿಶೇಷವಾಗಿ ಕಾಫಿಯಲ್ಲಿ ಇರುವ ಕೆಫೀನ್ ಮಕ್ಕಳ ದೇಹ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಂದು ಕಪ್ ಕಾಫಿಯೇ ಮಕ್ಕಳಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಕಬ್ಬಿಣದ ಕೊರತೆ ಸಮಸ್ಯೆ
ಬೆಳವಣಿಗೆಯ ಹಂತದಲ್ಲಿರುವ ಮಕ್ಕಳಿಗೆ ಕಬ್ಬಿಣ ಸಮೃದ್ಧ ಆಹಾರ ಅತ್ಯಗತ್ಯ. ಆದರೆ ಚಹಾ–ಕಾಫಿಯಲ್ಲಿ ಇರುವ ಕೆಲವು ರಾಸಾಯನಿಕ ಅಂಶಗಳು ಆಹಾರದಲ್ಲಿನ ಕಬ್ಬಿಣವನ್ನು ದೇಹ ಹೀರಿಕೊಳ್ಳುವುದನ್ನು ತಡೆಯುತ್ತವೆ. ಇದರಿಂದ ಮಕ್ಕಳು ತೆಳ್ಳಗಾಗುವುದು, ರಕ್ತಹೀನತೆ (ಅನೀಮಿಯಾ) ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.
ಮೆದುಳಿನ ಮೇಲೆ ಕೆಫೀನ್ ಪರಿಣಾಮ
ವಯಸ್ಕರಲ್ಲಿ ನಿದ್ರೆ ತಡೆಯಲು ಬಳಸುವ ಕೆಫೀನ್ ಮಕ್ಕಳಲ್ಲಿ ನರಮಂಡಲವನ್ನು ಅತಿಯಾಗಿ ಪ್ರಚೋದಿಸುತ್ತದೆ. ಇದರಿಂದ ಆತಂಕ, ಚಂಚಲತೆ, ಕೋಪ, ಗಮನ ಕೇಂದ್ರೀಕರಣದ ಕೊರತೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ನಿದ್ರೆಯ ಮೇಲೂ ಕೆಫೀನ್ ಕೆಟ್ಟ ಪರಿಣಾಮ ಬೀರುತ್ತದೆ.
ಹಸಿವು ಕಡಿಮೆಯಾಗುವ ಅಪಾಯ
ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದರಿಂದ ಮಕ್ಕಳ ಹಸಿವು ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಬೀರಿಸಿ ಎದೆಯುರಿ, ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳಿಗೆ ಕಾರಣವಾಗಬಹುದು. ಹಸಿವು ಇಲ್ಲದಿದ್ದರೆ ಆಹಾರ ಸೇವನೆ ಕಡಿಮೆಯಾಗುತ್ತಿದ್ದು, ಇದು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಸಕ್ಕರೆ ಹೆಚ್ಚಿದ ಅಪಾಯ
ಮಕ್ಕಳು ಇಷ್ಟಪಟ್ಟು ಕುಡಿಯುವ ಚಹಾ–ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇದು ಹಲ್ಲು ಹುಳುಕು, ಬೊಜ್ಜು ಮತ್ತು ಹೈಪರ್ ಆಕ್ಟಿವಿಟಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.
ಹತ್ತು ವರ್ಷದೊಳಗಿನ ಮಕ್ಕಳಿಗೆ ಚಹಾ ಅಥವಾ ಕಾಫಿ ನೀಡುವ ಬದಲು ಹಾಲು, ಗಂಜಿ ಅಥವಾ ಹಣ್ಣಿನ ರಸ ನೀಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಪೋಷಕರು ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ.



