HomeGadag Newsಬೆಳೆಹಾನಿ ಪರಿಹಾರ ವಿತರಣೆಯಲ್ಲೂ ಗೋಲ್‌ಮಾಲ್?!

ಬೆಳೆಹಾನಿ ಪರಿಹಾರ ವಿತರಣೆಯಲ್ಲೂ ಗೋಲ್‌ಮಾಲ್?!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಪ್ರಸಕ್ತ ವರ್ಷದ ಮುಂಗಾರಿನ ಆಶ್ಲೆಷಾ, ಮಘಾ ಮಳೆಗಳ ಅವಕೃಪೆಯಿಂದಾಗಿ ಕೈಗೆ ಬಂದಿದ್ದ ಮುಂಗಾರಿನ ಬೆಳೆಗಳು ನೀರು ಪಾಲಾಗಿದ್ದವು. ನರೇಗಲ್ಲ ಹೊಬಳಿ ಸೇರಿದಂತೆ ಗಜೇಂದ್ರಗಡ ತಾಲೂಕಿನಾದ್ಯಂತ ಬಹುತೇಕ ರೈತರ ಮುಂಗಾರಿ ಬೆಳೆಗಳು ಹಾಳಾಗಿ ಹೋಗಿದ್ದವು. ಬೆಳೆ ಹಾನಿಯ ಸಮೀಕ್ಷೆ ಕೈಗೊಂಡು ಪರಿಹಾರ ವಿತರಿಸುವ ಭರವಸೆಯನ್ನು ನೀಡಲಾಗಿತ್ತು. ಅದರಂತೆ ಜಿಲ್ಲೆಗೆ 135 ಕೋಟಿ ರೂ ಪರಿಹಾರ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಗಜೇಂದ್ರಗಡ ತಾಲೂಕಿನ ಬಹಳಷ್ಟು ರೈತರಿಗೆ ಬೆಳೆ ಹಾನಿ ಜಮೆಯಾಗದೇ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಪ್ರಸ್ತುತ ಗರಿಷ್ಠ 2 ಹೆಕ್ಟೇರ್ ಪ್ರದೇಶದ ಮಿತಿಗೊಳಪಟ್ಟು ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಮಳೆಯಾಶ್ರಿತ ಬೆಳೆಗೆ 8500 ರೂ, ನೀರಾವರಿ ಪ್ರದೇಶದ ಬೆಳೆಗೆ 17 ಸಾವಿರ ರೂ. ದೀರ್ಘಾವಧಿ (ತೋಟಗಾರಿಕೆ) ಬೆಳೆಗೆ 22,500 ರೂ ಪರಿಹಾರ ಘೋಷಿಸಲಾಗಿತ್ತು.

ರಾಜ್ಯ ಸರ್ಕಾರವು ಮುಂಗಾರಿನ ಅತಿವೃಷ್ಟಿ ಪರಿಹಾರ ವಿತರಣೆಗಾಗಿ ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸಲ್ಲಿಸಿತ್ತು. ಅದರಂತೆ ಗದಗ ಜಿಲ್ಲೆಗೆ 135 ಕೋಟಿ ರೂ ಬೆಳೆಹಾನಿ ಪರಿಹಾರ ಜಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಹಂತ ಹಂತವಾಗಿ ಎಲ್ಲ ರೈತರಿಗೂ ಬೆಳೆ ಹಾನಿ ಪರಿಹಾರ ಜಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆಲ ರೈತರಿಗೆ ಎರಡು ಕಂತುಗಳಲ್ಲಿ ಹಣ ಜಮೆಯಾಗಿವೆ. ಇನ್ನೊಂದೆಡೆ ಕೆಲ ರೈತರಿಗೆ ಬಿಡಿಗಾಸೂ ಜಮೆಯಾಗಿಲ್ಲ. ಬೆಳೆ ಹಾನಿ ವಿತರಣೆಯಲ್ಲಿ ಸಾಕಷ್ಟು ಗೋಲ್‌ಮಾಲ್ ಆಗಿದೆ ಎಂದು ಎಲ್ಲೆಡೆ ರೈತರು ಪ್ರತಿಭಟನೆ ಮಾಡಿದ್ದರೂ ಸಹ ಜಿಲ್ಲಾಡಳಿತ ಮಾತ್ರ ಎಲ್ಲ ರೈತರಿಗೆ ಬೆಳೆ ಹಾನಿ ಜಮೆಯಾಗಿದೆ ಎಂದು ಹೇಳಿತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದ (ಪ್ರಕೃತಿ ವಿಕೋಪ ಶಾಖೆ) ಪ್ರಕಾರ 2025-26ನೇ ಸಾಲಿನಲ್ಲಿ ಗಜೇಂದ್ರಗಡ ತಾಲೂಕಿನ 7605 ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ವಯ ರೂ. 7,20,97,827 ಪರಿಹಾರ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ರೂ. 7,20,97,357 ಪರಿಹಾರ ಸೇರಿದಂತೆ ಒಟ್ಟು 14,41,95,184 ರೂ ಪರಿಹಾರ ವಿತರಿಸಲಾಗಿದೆ. ಆದರೆ, ತಾಲೂಕಿನ ಬಹಳಷ್ಟು ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆಯೇ ಆಗಿಲ್ಲ. ಹಾಗಿದ್ದರೆ, 14 ಕೋಟಿಗೂ ಅಧಿಕ ಹಣ ಎಲ್ಲಿ ಹೋಗಿದೆ ಎಂಬ ಪ್ರಶ್ನೆ ರೈತರದ್ದಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದ ಸಂಶಯವಿದೆ. ಗಜೇಂದ್ರಗಡ ತಾಲೂಕಿನ 7605 ರೈತರಿಗೆ ಬೆಳೆ ಹಾನಿ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದು, ಯಾವ ರೈತರ ಖಾತೆಗೆ ಎಷ್ಟು ಪರಿಹಾರ ವಿತರಣೆಯಾಗಿದೆ ಎಂಬ ವಿವರವನ್ನು ಕೇಳಲಾಗಿದೆ. ಅದರ ವಿವರ ಬಂದಲ್ಲಿ ಸತ್ಯ ಹೊರ ಬರಲಿದೆ.

  • ಶರಣಪ್ಪ ಧರ್ಮಾಯತ
    ಅಧ್ಯಕ್ಷರು, ರೈತರ ಸೇನಾ ನರೇಗಲ್ಲ

ಬೆಳೆಹಾನಿ ವಿತರಣೆಯು ಸಂಪೂರ್ಣ ಡಿಬಿಟಿ ಮುಖಾಂತರ ನಡೆದಿದ್ದು, ಯಾವುದೇ ಅವ್ಯವಹಾರಕ್ಕೆ ಆಸ್ಪದವಿಲ್ಲ. ರೈತರ ಎಫ್‌ಐಡಿಯಲ್ಲಿನ ವ್ಯತ್ಯಾಸ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದ ಪರಿಹಾರ ವಿತರಣೆಯಲ್ಲಿ ತೊಡಕಾಗಿದೆ. ಅದಕ್ಕಾಗಿ ಎಲ್ಲ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸುವಂತೆ ತಿಳಿಸಲಾಗಿದೆ.
— ಕಿರಣಕುಮಾರ ಕುಲಕರ್ಣಿ, ಗಜೇಂದ್ರಗಡ ತಹಸೀಲ್ದಾರ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!