ಬೆಂಗಳೂರು: ಹೊಸ ವರ್ಷದ ಆರಂಭದೊಂದಿಗೆ ರಾಜ್ಯದ ವಾತಾವರಣದಲ್ಲೂ ಬದಲಾವಣೆಗಳು ಕಂಡುಬಂದಿವೆ. ಜನವರಿ 1ರಂದು ರಾಜ್ಯದ ಕೆಲವು ಭಾಗಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಕಂಡುಬಂದಿದೆ. ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಕನಿಷ್ಠ ತಾಪಮಾನ 13°C ರಿಂದ 19°C ನಡುವಿದ್ದು, ಗರಿಷ್ಠ ತಾಪಮಾನ 27°C–28°C ಇರಲಿದೆ.
ಬೀದರ್, ವಿಜಯಪುರ, ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತ ಅಲೆ ಪರಿಸ್ಥಿತಿ ಮುಂದುವರಿದಿದ್ದು, ಹವಾಮಾನ ಇಲಾಖೆ ಈಗಾಗಲೇ ಅಲರ್ಟ್ ನೀಡಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಗಮನಾರ್ಹವಾಗಿ ಕುಸಿತಗೊಂಡಿದ್ದು, ಬೀದರ್ನಲ್ಲಿ 6.4°C, ವಿಜಯಪುರದಲ್ಲಿ 9.9°C ಹಾಗೂ ಬೆಳಗಾವಿಯಲ್ಲಿ 8.7°C ದಾಖಲಾಗಿದೆ.
ಕರಾವಳಿ ಕರ್ನಾಟಕದಲ್ಲಿ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವಿದ್ದು, ಕನಿಷ್ಠ ತಾಪಮಾನ 19°C–20°C ಇರಲಿದೆ. ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಬೆಳಿಗ್ಗೆ ತಂಪಾದ ವಾತಾವರಣ ಕಂಡುಬರಲಿದೆ. ಮಂಗಳೂರು ಭಾಗದಲ್ಲಿ ಗರಿಷ್ಠ ತಾಪಮಾನ 28°C–30°C ಮತ್ತು ಕನಿಷ್ಠ ತಾಪಮಾನ 20°C–21°C ಇರಲಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಭಾಗಶಃ ಮೋಡ ಕವಿದ ಒಣ ಹವಾಮಾನ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



