ಭಾರತ ಮತ್ತು ಶ್ರೀಲಂಕಾ ಸಂಯುಕ್ತ ಆತಿಥ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ನಾಯಕ ಮಿಚೆಲ್ ಮಾರ್ಷ್ ನೇತೃತ್ವದಲ್ಲಿ ಆಯ್ಕೆಯಾದ ಈ ತಂಡದಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳು ಗಮನ ಸೆಳೆದಿವೆ.
2025ರಲ್ಲಿ ಟಿ20 ಮಾದರಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆಟಗಾರನನ್ನು ಆಯ್ಕೆ ಮಂಡಳಿ ಕೈಬಿಟ್ಟಿದ್ದರೆ, ಇತ್ತ ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ತಂಡದ ಹೊರಗಿದ್ದ ಆಟಗಾರನಿಗೆ ವಿಶ್ವಕಪ್ ಅವಕಾಶ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
2026ರ ಟಿ20 ವಿಶ್ವಕಪ್ ತಂಡದಲ್ಲಿ ಮಿಚೆಲ್ ಓವನ್ ಅವರನ್ನು ಕೈಬಿಡಲಾಗಿದೆ. ಕಳೆದ ವರ್ಷ ಬಿಗ್ ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ವಿರುದ್ಧ ಹೋಬಾರ್ಟ್ ಹರಿಕೇನ್ಸ್ ಪರ ಅವರು ಕೇವಲ 42 ಎಸೆತಗಳಲ್ಲಿ 11 ಸಿಕ್ಸರ್‌ಗಳೊಂದಿಗೆ 108 ರನ್‌ಗಳ ಸ್ಫೋಟಕ ಶತಕ ಬಾರಿಸಿ ಭಾರೀ ಗಮನ ಸೆಳೆದಿದ್ದರು. ಆದರೆ ಈ ಪ್ರದರ್ಶನವೂ ಅವರಿಗೆ ವಿಶ್ವಕಪ್ ಸ್ಥಾನ ಒದಗಿಸಲು ಸಾಕಾಗಿಲ್ಲ.
ಇನ್ನೊಂದು ಅಚ್ಚರಿಯ ನಿರ್ಧಾರವಾಗಿ, ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದಿದ್ದ ಕೂಪರ್ ಕಾನೊಲಿ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಲಾಗಿದೆ. ಅವರ ಜೊತೆಗೆ ಮ್ಯಾಥ್ಯೂ ಶಾರ್ಟ್, ಮ್ಯಾಟ್ ಕುನ್ಹೆಮನ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರನ್ನು ಕೂಡ ತಂಡದಲ್ಲಿ ಸೇರಿಸಲಾಗಿದೆ. ಈ ನಾಲ್ವರು ಆಟಗಾರರಿಗೆ ಇದು ಮೊದಲ ಟಿ20 ವಿಶ್ವಕಪ್ ಆಗಲಿದೆ.
ಆಸ್ಟ್ರೇಲಿಯಾ ತಂಡವು ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಂತಹ ಅನುಭವೀ ಆಟಗಾರರನ್ನು ಹೊಂದಿದೆ. ಇನ್ನು ಸ್ಪಿನ್ ವಿಭಾಗವನ್ನು ಆಡಮ್ ಜಂಪಾ ಮುನ್ನಡೆಸಲಿದ್ದು, ಟಿ20 ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಈ ತಂಡದ ಆಯ್ಕೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಸ್ಟ್ರೇಲಿಯಾದ ವಿಶ್ವಕಪ್ ತಯಾರಿಯಲ್ಲಿ ಹೊಸ ತಂತ್ರದ ಸುಳಿವು ನೀಡುತ್ತಿದೆ.
2026 ರ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಹೇಜಲ್‌ವುಡ್, ನಾಥನ್ ಎಲ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ಮ್ಯಾಥ್ಯೂ ವೇಡ್, ಕೂಪರ್ ಕಾನೊಲಿ, ಆಡಮ್ ಜಂಪಾ, ಮ್ಯಾಟ್ ಕುನ್ಹೆಮನ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್.



