ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಭಾರತೀಯ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ‘ಬಾಹುಬಲಿ’ ನಂತರ ಅವರ ಸಂಭಾವನೆ 100 ಕೋಟಿ ರೂಪಾಯಿ ದಾಟಿದ್ದು, ಕೆಲ ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಪ್ರಭಾಸ್ ಸಿನಿಮಾಗಳಿಂದ ಲಾಭವಾಗುತ್ತಿರುವುದು ನಟರಿಗೆ ಮಾತ್ರವಲ್ಲ, ನಿರ್ದೇಶಕರು ಹಾಗೂ ತಂತ್ರಜ್ಞರಿಗೂ.
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ನಿರ್ದೇಶಕ ಮಾರುತಿ ಅವರಿಗೆ ಸಿಕ್ಕಿರುವ ಸಂಭಾವನೆ ಇದೀಗ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾಗೆ ಮಾರುತಿ 18 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದು ಅನುಭವೀ ಸ್ಟಾರ್ ನಿರ್ದೇಶಕರಿಗೂ ಸಿಗದ ಮಟ್ಟದ ಮೊತ್ತ ಎನ್ನಲಾಗಿದೆ.
ಮಾರುತಿ ಇದುವರೆಗೂ ಸಾಧಾರಣ ಯಶಸ್ಸು ಕಂಡ ಕೆಲವು ಸಿನಿಮಾಗಳನ್ನು ಮಾತ್ರ ನಿರ್ದೇಶಿಸಿದ್ದಾರೆ. ದೊಡ್ಡ ಹಿಟ್, ಬಿಗ್ ಬಜೆಟ್ ಅಥವಾ ಟಾಪ್ ಸ್ಟಾರ್ ಸಿನಿಮಾಗಳ ಅನುಭವ ಇಲ್ಲದಿದ್ದರೂ, ಪ್ರಭಾಸ್ ಅವರು ಮಾರುತಿ ಹೇಳಿದ ಕಥೆಗೆ ಮಾರು ಹೋಗಿ ಅವರೊಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಎರಡು ವರ್ಷಕ್ಕೂ ಹೆಚ್ಚು ಕಾಲ್‌ಶೀಟ್ ನೀಡಿರುವುದು ಈ ನಂಬಿಕೆಯ ಸಾಕ್ಷಿ.
ಸಂದರ್ಶನವೊಂದರಲ್ಲಿ ಮಾತನಾಡಿದ ಮಾರುತಿ, ‘ಈ ಸಿನಿಮಾಗೆ ನನ್ನ ಜೀವನದ ಮೂರು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಆ ಮೂರು ವರ್ಷಗಳ ಶ್ರಮಕ್ಕೆ 18 ಕೋಟಿ ಸಂಭಾವನೆ ನೀಡಿದ್ದಾರೆ. ಇದಕ್ಕೆ ನೇರ ಕಾರಣ ಪ್ರಭಾಸ್ ಅವರೇ’ ಎಂದು ಹೇಳಿದ್ದಾರೆ. ಈ ಮೊತ್ತದಲ್ಲಿ ನಾಲ್ಕು ಅಥವಾ ಐದು ಸಣ್ಣ ಬಜೆಟ್ ಸಿನಿಮಾಗಳನ್ನು ನಿರ್ಮಿಸಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ.
ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಿಗೆ ಭಾರಿ ಸಂಭಾವನೆ ನೀಡುವ ಸಂಸ್ಕೃತಿ ಈಗಾಗಲೇ ಇದೆ. ರಾಜಮೌಳಿ ಅವರಿಗೆ ನಟರಿಗಿಂತಲೂ ಹೆಚ್ಚಿನ ಸಂಭಾವನೆ ಸಿಗುತ್ತಿದೆ. ‘ವಾರಣಾಸಿ’ ಸಿನಿಮಾಕ್ಕೆ ಬೋಯಪಾಟಿ ಶ್ರೀನು ಅವರಿಗೆ 10 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.
‘ದಿ ರಾಜಾ ಸಾಬ್’ ಹಾರರ್ ಕಾಮಿಡಿ ಸಿನಿಮಾಗಿದ್ದು, ಪ್ರಭಾಸ್ ಮೊದಲ ಬಾರಿಗೆ ಈ ಜಾನರ್‌ನಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಳವಿಕಾ ಮೋಹನನ್, ರಿಧಿ ಕುಮಾರ್ ಮತ್ತು ನಿಧಿ ಅಗರ್ವಾಲ್ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.



