‘ಕಿರಿಕ್ ಪಾರ್ಟಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕೆಲವೇ ದಿನಗಳಲ್ಲಿ ಸ್ಟಾರ್ ಆಗಿದ್ದ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಸಿನಿ ಬದುಕಿಗೆ 9 ವರ್ಷಗಳು ಪೂರೈಸಿದ್ದಾರೆ. ಈ ಸಾಧನೆಯನ್ನು ಸಂಭ್ರಮಿಸುತ್ತಾ ಅವರು ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಆ ಪತ್ರವೇ ಈಗ ವಿವಾದಕ್ಕೆ ಕಾರಣವಾಗಿದೆ.
ಒಂಭತ್ತು ವರ್ಷಗಳ ಸಿನಿ ಪಯಣದಲ್ಲಿ 26 ಸಿನಿಮಾಗಳಲ್ಲಿ ನಟಿಸಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ತಮ್ಮ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’ ಎಂಬ ಹೆಸರನ್ನೇ ಅವರು ಉಲ್ಲೇಖಿಸಿಲ್ಲ. ಅವಕಾಶ ಕೊಟ್ಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅವರನ್ನೂ ನೆನೆಸದೆ ಹೋದದ್ದು ಕನ್ನಡ ಸಿನಿ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.
ರಶ್ಮಿಕಾರ ಈ ವರಸೆ ಹೊಸದಲ್ಲ ಎನ್ನುವ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಆದರೂ ಈ ವಿಶೇಷ ಸಂದರ್ಭದಲ್ಲಾದರೂ ಹತ್ತಿದ ಏಣಿಯನ್ನು ನೆನೆಯಬಹುದಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ದಡ ಸೇರಿಸಿದ ಅಂಬಿಗನನ್ನೇ ಮರೆತಂತೆ ಮೊದಲ ಚಿತ್ರದ ನೆನಪಿಲ್ಲದಿರುವುದು ಮತ್ತೆ ಟೀಕೆಗೆ ದಾರಿ ಮಾಡಿಕೊಟ್ಟಿದೆ.
ಈ ನಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಭಿಮಾನಿಗಳು ರಶ್ಮಿಕಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, “ಕನ್ನಡದಿಂದ ಬೆಳೆದು ಹೊರಗಿನ ಭಾಷೆಗಳಲ್ಲಿ ಹೆಸರು ಮಾಡಿದ ಬಳಿಕ ಕನ್ನಡವನ್ನೇ ಮರೆತಿದ್ದಾರೆ” ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. 9 ವರ್ಷದ ಸಂಭ್ರಮವೇ ಇದೀಗ ರಶ್ಮಿಕಾಗೆ ಮುಜುಗರವಾಗಿ ಪರಿಣಮಿಸಿದೆ.



