ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು (ಜನವರಿ 02) ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡುವ ಕುರಿತು ಚರ್ಚೆ ನಡೆಯಿತು. ಸಭೆಯ ತೀರ್ಮಾನದಂತೆ ಅವರ ಪುತ್ರಿ ಚೈತನ್ಯ ಅವರಿಗೆ ಗ್ರೂಪ್–ಸಿ ಹುದ್ದೆ ನೀಡಲು ಒಪ್ಪಿಗೆ ನೀಡಲಾಗಿದೆ.
ಮಹಾಂತೇಶ್ ಬೀಳಗಿ ಅವರು 2025ರ ನವೆಂಬರ್ 25ರಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇನ್ನೋವಾ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬ್ರಿಡ್ಜ್‌ಗೆ ಡಿಕ್ಕಿಯಾಗಿ ನಾಲ್ಕೈದು ಬಾರಿ ಪಲ್ಟಿಯಾಗಿತ್ತು. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಗಂಭೀರ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಅಪಘಾತದಲ್ಲಿ ಚಾಲಕ ಆರೋಕಿಯಾ ಆಂಥೋನಿ ರಾಜನಿಗೂ ಗಂಭೀರ ಗಾಯಗಳಾಗಿದ್ದವು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಂತೇಶ್ ಬೀಳಗಿ ಅವರ ಸಂಬಂಧಿ ಬಸವರಾಜ್ ಕಮರಟಗಿ ನೀಡಿದ ದೂರಿನ ಮೇರೆಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ಧ 281, 125(A), 125(B), 106 ಬಿಎನ್‌ಎಸ್ ಅಡಿ ಎಫ್‌ಐಆರ್ ದಾಖಲಾಗಿದೆ. ಚಾಲಕನ ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.



