ರಾಯ್ಪುರ: ದಕ್ಷಿಣ ಛತ್ತೀಸ್ಗಢದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಭದ್ರತಾ ಪಡೆಗಳು 14 ಸಶಸ್ತ್ರ ಮಾವೋವಾದಿಗಳನ್ನು ಹತ್ಯೆ ಮಾಡಿವೆ. ಅಧಿಕಾರಿಗಳ ಪ್ರಕಾರ, ಇದು 2026ರ ಮೊದಲ ಪ್ರಮುಖ ಮಾವೋವಾದಿ ವಿರೋಧಿ ಕಾರ್ಯಾಚರಣೆ ಆಗಿದೆ.
ಬಿಜಾಪುರದ ಬಸಗುಡ–ಟಾರೆಮ್ ಅರಣ್ಯ ಪ್ರದೇಶ ಮತ್ತು ಸುಕ್ಮಾದ ಕೊಂಟಾ–ಕಿಸ್ತಾರಾಮ್ ಕಾಡುಗಳಲ್ಲಿ ಮಾವೋವಾದಿಗಳ ಓಡಾಟದ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದಲ್ಲಿ ರಾಯ್ಪುರದ ದಕ್ಷಿಣ ಭಾಗದಲ್ಲಿ, ಸುಮಾರು 450 ಕಿ.ಮೀ ದೂರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಜಿಲ್ಲಾ ಮೀಸಲು ಗಾರ್ಡ್ (ಡಿಆರ್ಜಿ)ನ ಪ್ರತ್ಯೇಕ ತಂಡಗಳು ಶೋಧ ಕಾರ್ಯಾಚರಣೆಗೆ ಇಳಿದಿದ್ದು, ಶನಿವಾರ (ಜ.3) ಬೆಳಿಗ್ಗೆಯಿಂದ ಎರಡೂ ಪ್ರದೇಶಗಳಲ್ಲಿ ಗುಂಡಿನ ಚಕಮಕಿ ನಡೆಯಿತು. ಸುಕ್ಮಾ ಎನ್ಕೌಂಟರ್ ಸ್ಥಳದಿಂದ 12 ಮತ್ತು ಬಿಜಾಪುರದಿಂದ 2 ಮಾವೋವಾದಿಗಳ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಸ್ತಾರ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯ ವೇಳೆ ಎಕೆ–47, ಐಎನ್ಎಸ್ಎಎಸ್ ಅಸಾಲ್ಟ್ ರೈಫಲ್, ಸೆಲ್ಫ್–ಲೋಡಿಂಗ್ ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ. ಎರಡೂ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿದ್ದು, ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಈ ಎನ್ಕೌಂಟರ್ನಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾದ ವರದಿಗಳು ಇಲ್ಲ. ಬಸ್ತಾರ್ ವಿಭಾಗದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳು ಅತ್ಯಂತ ಮಾವೋವಾದಿ ಪೀಡಿತ ಪ್ರದೇಶಗಳಾಗಿವೆ. ಈಗಾಗಲೇ ದಕ್ಷಿಣ ಛತ್ತೀಸ್ಗಢದಲ್ಲಿ 256 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 31, 2026ರೊಳಗೆ ಭಾರತವನ್ನು ಮಾವೋವಾದಿ ಹಿಂಸಾಚಾರದಿಂದ ಮುಕ್ತಗೊಳಿಸುವ ಗುರಿ ಹೊಂದಿದ್ದಾರೆ.



