ತಿರುಪತಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಿರುಪತಿ ತಿರುಮಲ ದೇವಸ್ಥಾನದ ಗೋಪುರ ಏರಿ ಗದ್ದಲ ಸೃಷ್ಟಿಸಿದ ಘಟನೆ ತಡರಾತ್ರಿ ನಡೆದಿದೆ. ಭಕ್ತರಂತೆ ದೇವಸ್ಥಾನ ಪ್ರವೇಶಿಸಿದ್ದ ವ್ಯಕ್ತಿ, ಟೆಂಟ್ ಕಂಬ್‌ಗಳ ಸಹಾಯದಿಂದ ಗರ್ಭಗುಡಿಯ ಮೇಲಿರುವ ಗೋಪುರವನ್ನು ಏರಿದ್ದಾನೆ.
ಗೋಪುರದ ಮೇಲಿನ ಕಲಶಗಳಿರುವ ಭಾಗವನ್ನು ತಲುಪಿದ ಬಳಿಕ ಆತ ಮದ್ಯ ನೀಡುವಂತೆ ವಿಚಿತ್ರ ಬೇಡಿಕೆ ಇಟ್ಟು ಗೊಂದಲ ಉಂಟುಮಾಡಿದ್ದಾನೆ. ಈ ಘಟನೆ ದೇವಸ್ಥಾನ ಆವರಣದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಪೆದ್ದಮಲ್ಲ ರೆಡ್ಡಿ ಕಾಲೋನಿಯ ಕುರ್ಮಾ ವಾಡಾ ನಿವಾಸಿ ಕುಟ್ಟಡಿ ತಿರುಪತಿ (45) ಈ ಕೃತ್ಯ ಎಸಗಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ತಿರುಪತಿ ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಗೋಪುರದಿಂದ ಕೆಳಗೆ ಇಳಿಯುವಂತೆ ಮನವೊಲಿಸುವ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಶಿಖರದವರೆಗೆ ತೆರಳಿ ಮಾತನಾಡಿದಾಗ, “ಕ್ವಾರ್ಟರ್ ಬಾಟಲ್ ಮದ್ಯ ಕೊಟ್ಟರೆ ಮಾತ್ರ ಕೆಳಗೆ ಬರುತ್ತೇನೆ” ಎಂದು ಆತ ಪಟ್ಟು ಹಿಡಿದಿದ್ದಾನೆ.
ಪೊಲೀಸರು ಮೊದಲು ಕೆಳಗೆ ಇಳಿದ ಬಳಿಕ ಮದ್ಯ ನೀಡುವುದಾಗಿ ಭರವಸೆ ನೀಡಿದ ನಂತರ ಆತ ಮನವೊಲಿದಿದ್ದಾನೆ. ಕಬ್ಬಿಣದ ಏಣಿಗಳ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ನಂತರ ಪೊಲೀಸರು ಬಂಧಿಸಿದ್ದಾರೆ.



