ಬೆಳಗಾವಿ: ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ್ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣದಲ್ಲಿ ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಅವರ ಪುತ್ರ ಚಿದಾನಂದ ಸವದಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ನಿಂಗಪ್ಪ ಕರೆಣ್ಣವರ್ ನೀಡಿರುವ ಮಾಹಿತಿಯಂತೆ, ಮಾತುಕತೆಗಾಗಿ ಎಂದು ಮನೆಗೆ ಕರೆಸಿಕೊಂಡು, ಚಿದಾನಂದ ಸವದಿ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತಲೆ ಒಡೆಯುವ ಉದ್ದೇಶದಿಂದ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ನಿಂಗಪ್ಪ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಳಿಕ ಅವರು ಭಯಭೀತರಾಗಿದ್ದು, ಸರ್ಕಾರ ತಕ್ಷಣ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
“ನನಗೆ ಜೀವಭಯವಿದೆ. ಸರ್ಕಾರ ರಕ್ಷಣೆ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದೇ ನನ್ನ ಮುಂದಿನ ದಾರಿ” ಎಂದು ನಿಂಗಪ್ಪ ಕರೆಣ್ಣವರ್ ನೋವಿನೊಂದಿಗೆ ಹೇಳಿದ್ದಾರೆ. ಪ್ರಕರಣ ಇದೀಗ ಕಾನೂನು ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಕ್ರಮಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.



