ಬಳ್ಳಾರಿ: ಶಾಸಕ ಭರತ್ ರೆಡ್ಡಿ ನೇತೃತ್ವದಲ್ಲಿ ನಿನ್ನೆ ಬಳ್ಳಾರಿಯಲ್ಲಿ ಗುಂಡಾಗರ್ದಿ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಸಾವಿರಾರು ಗೂಂಡಾಗಳನ್ನು ಕರೆತಂದು ಗೂಂಡಾಗಿರಿ ನಡೆಸಲಾಗಿದೆ ಎಂದು ಹೇಳಿದರು.
ಬ್ಯಾನರ್ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ಇಂದು ಬಳ್ಳಾರಿಗೆ ಆಗಮಿಸಿದ ವಿಜಯೇಂದ್ರ, ಗಾಯಗೊಂಡ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
“ಸತೀಶ್ ರೆಡ್ಡಿ ಎಂಬ ವ್ಯಕ್ತಿ ಖಾಸಗಿ ವ್ಯಕ್ತಿಗಳನ್ನು ಬಳಸಿ ಫೈರ್ ಮಾಡಿಸಿರುವ ಮಾಹಿತಿ ಇದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಗುಂಡಾಗರ್ದಿಯ ಮೂಲಕ ನಮ್ಮ ನಾಯಕರನ್ನು ಹೆದರಿಸುವ ಪ್ರಯತ್ನ ನಡೆದಿದೆ” ಎಂದು ಆರೋಪಿಸಿದರು.
ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಆನಂದ್ ಸಿಂಗ್ ಅವರನ್ನು ಹೆದರಿಸುವ ಕೆಲಸ ನಡೆಯುತ್ತಿದೆ. ಆದರೆ ಇದರಿಂದ ಯಾರೂ ಹೆದರುವುದಿಲ್ಲ. ಬಿಜೆಪಿ ಕಾರ್ಯಕರ್ತರು ಧೃತಿಗೆಡಬೇಕಾದ ಅಗತ್ಯವಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ವಾಲ್ಮೀಕಿ ಪುತ್ಥಳಿ ವಿಚಾರದಲ್ಲಿ ಗಲಾಟೆ ಮಾಡಿದ ಕಾಂಗ್ರೆಸ್ ಶಾಸಕರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ ಅವರು, “ಮಹರ್ಷಿ ವಾಲ್ಮೀಕಿಯನ್ನು ಪೂಜಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ರೀರಾಮುಲು ಮನವಿ ಮೇರೆಗೆ ವಾಲ್ಮೀಕಿ ಜಯಂತಿಯನ್ನು ಘೋಷಿಸಿ ರಜಾ ದಿನವನ್ನಾಗಿ ಮಾಡಿದ್ದರು. ವಾಲ್ಮೀಕಿ ಭವನಕ್ಕೆ ಹಣ ನೀಡಿದ್ದು ಕೂಡ ಶ್ರೀರಾಮುಲು ಅವರೇ. 25 ವರ್ಷಗಳ ಹಿಂದೆಯೇ ಎಸ್ಪಿ ಸರ್ಕಲ್‌ನಲ್ಲಿ ಪುತ್ಥಳಿ ಇತ್ತು. ಆದರೆ ಇವತ್ತು ರಾಜಕೀಯ ತೆವಲಿಗಾಗಿ ಬ್ಯಾನರ್ ಹಾಕಲಾಗಿದೆ” ಎಂದು ಹೇಳಿದರು.



