ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿನ ಕೊರತೆಗಳನ್ನು ಪರಿಹರಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಬ್ಯಾಂಕ್ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಬೇಕೆಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಬ್ಯಾಂಕಿನ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ವಲಯ ವ್ಯವಸ್ಥಾಪಕರಿಗೆ ಸಂಘದ ವತಿಯಿಂದ ದೂರು ನೀಡಿರುವ ಅವರು, ಬ್ಯಾಂಕಿನಲ್ಲಿ ಕಳೆದ 3-4 ತಿಂಗಳಿನಿಂದ ಪಾಸ್‌ಬುಕ್ ಎಂಟ್ರಿಯನ್ನೇ ಮಾಡುತ್ತಿಲ್ಲ. ಸಿಬ್ಬಂದಿಯವರನ್ನು ಕೇಳಿದರೆ ಪ್ರಿಂಟಿಂಗ್ ಮಶಿನ್ ಹಾಳಾಗಿದೆ ಎಂದು ಹೇಳುತ್ತಾರೆ. ತಿಂಗಳುಗಟ್ಟಲೆ ಈ ಅವ್ಯವಸ್ಥೆ ಸರಿಯಾಗದೆ ನಮಗೆ ತೀವ್ರ ತೊಂದರೆಯಾಗುತ್ತಿದೆ. ಸಿಬ್ಬಂದಿ ಕೊರತೆಯೂ ಇರುವದರಿಂದ ಒಂದು ಕೆಲಸಕ್ಕಾಗಿ ಗ್ರಾಹಕರು ಐದಾರು ಸಾರೆ ಬ್ಯಾಂಕಿಗೆ ತಿರುಗಾಡಬೇಕು.
ನಿಯಮದ ಪ್ರಕಾರ ಬ್ಯಾಂಕಿನಲ್ಲಿ ಏಳು ಜನ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಆದರೆ ಕಾರ್ಯ ನಿರ್ವಹಿಸುತ್ತಿರುವುದು ಕೇವಲ ನಾಲ್ಕೇ ಜನ. ಇದರಿಂದ ವಾರದ ಎಲ್ಲ ದಿನಗಳಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿರುವ ಬ್ಯಾಂಕಿನಲ್ಲಿ ಸಮರ್ಪಕ ಸೇವೆಯನ್ನು ಒದಗಿಸಲು ಸಿಬ್ಬಂದಿಯವರಿಂದ ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ರಜೆಯ ಮೇಲೆ ಹೋಗಿರುವ ಸಿಬ್ಬಂದಿಯ ಸ್ಥಾನದಲ್ಲಿ ಮತ್ತಾರೂ ಬಂದಿಲ್ಲ. ಇದೆಲ್ಲವನ್ನೂ ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಅವಶ್ಯಕತೆ ಇರುವ ಗ್ರಾಹಕರಿಗೆ ನಾವು ಸ್ಟೇಟ್‌ಮೆಂಟ್ ಕೊಡುತ್ತಿದ್ದೇವೆ. ನಮ್ಮಲ್ಲಿ ಸಮರ್ಪಕವಾದ ಸಿಬ್ಬಂದಿ ಇದ್ದರೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಆದರೂ ಇರುವ ಸಿಬ್ಬಂದಿಯಿಂದಲೇ ನಾವು ಉತ್ತಮ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದೇವೆ.
-
ವೆಂಕಟೇಶ ಸಿ.
ವ್ಯವಸ್ಥಾಪಕರು.



