ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಶತಕ ಸಿಡಿಸಿದ ತ್ರಿಪುರ ಆಟಗಾರ ಸ್ವಪ್ನಿಲ್ ಸಿಂಗ್ ಅಶ್ಲೀಲವಾಗಿ ಸಂಭ್ರಮಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವಪ್ನಿಲ್ ಸಂಭ್ರಮದ ರೀತಿಗೆ ಕ್ರಿಕೆಟ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ 108 ರನ್ಗಳ ಶತಕ ಬಾರಿಸಿದರು. ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ತಂಡವು 50 ಓವರ್ಗಳಲ್ಲಿ 332 ರನ್ಗಳ ದೊಡ್ಡ ಮೊತ್ತ ಕಲೆಹಾಕಿತು.
333 ರನ್ಗಳ ಕಠಿಣ ಗುರಿ ಬೆನ್ನತ್ತಿದ ತ್ರಿಪುರ ತಂಡದ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ವಪ್ನಿಲ್ ಸಿಂಗ್ 93 ಎಸೆತಗಳಲ್ಲಿ 2 ಸಿಕ್ಸ್ ಮತ್ತು 7 ಫೋರ್ಗಳೊಂದಿಗೆ ಶತಕ ಸಿಡಿಸಿದರು. ಶತಕ ಪೂರೈಸಿದ ಬಳಿಕ ಸ್ವಪ್ನಿಲ್ ಬ್ಯಾಟ್ ಮೂಲಕ ಅಶ್ಲೀಲ ಸನ್ನೆ ಮಾಡಿ ವಿಚಿತ್ರವಾಗಿ ಸಂಭ್ರಮಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದು ಇದೀಗ ವೈರಲ್ ಆಗಿದೆ.
ಆದರೆ ಸ್ವಪ್ನಿಲ್ ಅವರ ಶತಕದ ಹೊರತಾಗಿಯೂ ತ್ರಿಪುರ ತಂಡ 49 ಓವರ್ಗಳಲ್ಲಿ 252 ರನ್ಗಳಿಗೆ ಸೀಮಿತವಾಯಿತು. ಇದರೊಂದಿಗೆ ಕರ್ನಾಟಕ ತಂಡ 80 ರನ್ಗಳ ಭರ್ಜರಿ ಜಯ ದಾಖಲಿಸಿತು.
ಇನ್ನು ಸ್ವಪ್ನಿಲ್ ಸಿಂಗ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಎರಡು ಸೀಸನ್ಗಳಿಂದ ಆರ್ಸಿಬಿ ತಂಡದ ಭಾಗವಾಗಿರುವ ಸ್ವಪ್ನಿಲ್, ಮುಂದಿನ ಐಪಿಎಲ್ನಲ್ಲಿ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.



