ತುಮಕೂರು: ಒಂದು ತಿಂಗಳ ಹಿಂದಷ್ಟೇ ಬೆಳಗಾವಿಯಲ್ಲಿ 30 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣದ ಬಳಿಕ ಇದೀಗ ತುಮಕೂರಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲೂ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ದೇವರಾಯನದುರ್ಗ ಮತ್ತು ದುರ್ಗದಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಕೇವಲ ಎರಡು ದಿನಗಳಲ್ಲಿ 11 ಮಂಗಗಳು ನಿಗೂಢವಾಗಿ ಮೃತಪಟ್ಟಿವೆ. ಈ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದೆಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ನಡೆಸಿದಾಗ, ಮೊದಲ ದಿನ ಏಳು ಹಾಗೂ ಎರಡನೇ ದಿನ ನಾಲ್ಕು ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಮೃತಪಟ್ಟ ಮಂಗಗಳಲ್ಲಿ ಒಂಬತ್ತು ಸಾಮಾನ್ಯ ಮಂಗಗಳು ಹಾಗೂ ಎರಡು ಲಂಗೂರಗಳು ಸೇರಿವೆ. ಪ್ರಾಥಮಿಕ ಪರಿಶೀಲನೆಯಲ್ಲಿ ಯಾವುದೇ ಸೋಂಕು ಅಥವಾ ಕಾಯಿಲೆಯಿಂದ ಮಂಗಗಳು ಸಾವನ್ನಪ್ಪಿರುವ ಲಕ್ಷಣಗಳು ಕಂಡುಬಂದಿಲ್ಲ.
ಸಾವಿನ ನಿಖರ ಕಾರಣ ಪತ್ತೆಹಚ್ಚಲು ಊರ್ಡಿಗೆರೆಯ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಂಗಗಳ ಕರುಳಿನಲ್ಲಿ ಅನ್ನ ಪತ್ತೆಯಾಗಿದೆ. ಇದರಿಂದ ವಿಷಪ್ರಾಶನದಿಂದಲೇ ಮರಣ ಸಂಭವಿಸಿರಬಹುದೆಂಬ ಅನುಮಾನ ಬಲಗೊಂಡಿದೆ. ಪ್ರಕರಣವನ್ನು ದೃಢಪಡಿಸಲು ಮಾದರಿಗಳನ್ನು ಬೆಂಗಳೂರಿನ ಪಶುವೈದ್ಯಕೀಯ ವಿದ್ಯಾಲಯ (IAH, VB)ಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ತುಮಕೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಪ್ರಕರಣ ದಾಖಲಿಸಿಕೊಂಡು, ದುಷ್ಕೃತ್ಯವಿದೆಯೇ ಎಂಬುದರ ಕುರಿತು ಅರಣ್ಯಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



