ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ತಾಯಿ ಮತ್ತು ಮೂರು ವರ್ಷದ ಮಗು ಮನೆ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಕೊಡಿಯಾಲ ಗ್ರಾಮದ ಆರ್ವಾರ ನಿವಾಸಿ ಹರೀಶ್ ಅವರ ಪತ್ನಿ ಮಧುಶ್ರೀ (34) ಮತ್ತು ಪುತ್ರ ಧನ್ವಿ (3) ಮೃತಪಟ್ಟವರು. ಶನಿವಾರ ರಾತ್ರಿ ಮನೆಯಲ್ಲೇ ಇದ್ದ ಮಧುಶ್ರೀ, ಭಾನುವಾರ ಬೆಳಗ್ಗೆ ಮಗುವಿನೊಂದಿಗೆ ಕಾಣೆಯಾಗಿದ್ದರು. ಬೆಳಗ್ಗೆಯಿಂದಲೇ ಮನೆಯವರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದಾಗ, ಮನೆ ಸಮೀಪದ ಕೆರೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಮಧುಶ್ರೀ ಅವರು ಮಗುವಿನೊಂದಿಗೆ ಸಾಯಲು ನಿರ್ಧರಿಸಿ, ಮಗುವನ್ನು ತನ್ನ ಸೊಂಟಕ್ಕೆ ಬಟ್ಟೆಯಿಂದ ಕಟ್ಟಿಕೊಂಡು ಕೆರೆಗೆ ಹಾರಿರುವ ಸಾಧ್ಯತೆ ವ್ಯಕ್ತವಾಗಿದೆ. ಕೆರೆಯಲ್ಲಿ ಮೃತದೇಹ ಪತ್ತೆಯಾದಾಗ ಮಗು ತಾಯಿಯನ್ನು ಅಪ್ಪಿಕೊಂಡ ಸ್ಥಿತಿಯಲ್ಲೇ ಕಂಡುಬಂದಿದ್ದು, ಸ್ಥಳದಲ್ಲಿ ನೆರೆದಿದ್ದವರ ಮನಸ್ಸು ಕರಗುವಂತೆ ಮಾಡಿದೆ.
ಮಧುಶ್ರೀ ಮೂಲತಃ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಹರೀಶ್ ಅವರನ್ನು ವಿವಾಹವಾಗಿದ್ದರು. ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಇತ್ತೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಈ ನಡುವೆ, ಮಧುಶ್ರೀ ಅವರ ತಾಯಿ ರತ್ನಾವತಿ ಅವರು ಮಗಳ ಸಾವಿನಲ್ಲಿ ಅನುಮಾನವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.



