ಬೆಂಗಳೂರು: “ದೇವಾಂಗ ಸಮಾಜ ಹಿಂದುಳಿದವರು ಎನ್ನುವ ಕೀಳರಿಮೆಯಿಂದ ಹೊರ ಬರಬೇಕು. ಹಿಂದುಳಿದ ವರ್ಗಗಳ ಸಹಾಯವಿಲ್ಲದೆ ಸಮಾಜ ಮುನ್ನಡೆಯುವುದಿಲ್ಲ. ಯಾರೂ ಸಹ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ನಗರದ ಅರಮನೆ ಮೈದಾನದಲ್ಲಿ ನಡೆದ ದೇವಾಂಗ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ದೊಡ್ಡ ಸಂಖ್ಯೆ ಹೊಂದಿರುವ ಸಮುದಾಯಗಳು ನಿಮ್ಮ ವೃತ್ತಿಯನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ವಿಶ್ವಕರ್ಮ ಸಮುದಾಯದ ಶಿಲ್ಪಕಲೆ ಎಲ್ಲರಿಗೂ ಒಲಿಯುವುದು ಕಷ್ಟ. ಕಲ್ಲನ್ನು ಕಡೆದು ವಿಗ್ರಹ ಮಾಡುವವರು ಅವರು. ಅವರು ಕಲ್ಲನ್ನು ಕಡೆದರೆ ಆಕೃತಿಯಾಗುತ್ತದೆ. ಕುಂಬಾರಿಕೆ ಕೆಲಸ ಎಲ್ಲರೂ ಮಾಡಲು ಆಗುತ್ತದೆಯೇ? ಅದಕ್ಕಾಗಿ ಕೀಳರಿಮೆ ಬೇಡ. ಕಾಯಕ ಮಾಡುವ ವರ್ಗಗಳಿಂದಲೇ ಸಮಾಜದಲ್ಲಿ ಮನುಷ್ಯತ್ವ ಬದುಕಿದೆ” ಎಂದರು.
“ದೇವಾಂಗ ಸಮಾಜ ಪ್ರತಿದಿನವೂ ಶ್ರಮಪಟ್ಟು ದುಡಿಯುವ ಸಮಾಜ. ಪ್ರತಿದಿನವೂ ನೀವು ಸ್ಪರ್ಧೆ ಎದುರಿಸುತ್ತಲೇ ಇದ್ದರೂ ಹಿಂದೇಟು ಹಾಕದೇ ಮುನ್ನಡೆಯುತ್ತಾ ಇದ್ದೀರಿ. ನೀವು ಸಹ ಮುಂದುವರೆದ ಜನಾಂಗ. ಸರ್ವರಿಗೂ ಸಮಪಾಲಿನೊಂದಿಗೆ ಇರುತ್ತೇವೆ. ಈ ಸಮಾಜಕ್ಕೆ ಶಕ್ತಿ ತುಂಬುತ್ತೇವೆ ಸ್ಥೈರ್ಯ ನಿಮ್ಮಲ್ಲಿ ಇರಬೇಕು” ಎಂದರು.
“ಸಮಾಜದ ಯುವಜನಾಂಗ ವಿದ್ಯೆಯನ್ನು ಪಡೆಯಬೇಕು ಜೊತೆಗೆ ನಿಮ್ಮ ಕಸುಬನ್ನು ಉಳಿಸಿ ಬೆಳೆಸಬೇಕು. ಆಧುನಿಕ ಕಾಲದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಳೆಯಬೇಕು. ಅನೇಕ ಕಾರ್ಪೋರೇಟ್ ಕಂಪೆನಿಗಳು ಬಟ್ಟೆ ಉತ್ಪಾದನೆ ಮಾಡುತ್ತವೆ. ಅವರಿಂದ ನಿಮಗೆ ಸ್ಪರ್ಧೆ ಉಂಟಾಗಿದೆ. ಆದರೆ ನಿಮ್ಮ ಬಳಿ ಅನುಭವ, ಶ್ರಮ, ಕೈಗುಣವಿದೆ” ಎಂದರು.



