ಹೊಸ ವರ್ಷ ದರ್ಶನ್ ಮತ್ತು ಪವಿತ್ರಾ ಗೌಡ ಪಾಲಿಗೆ ಕಹಿ ನೆನಪುಗಳನ್ನು ಮರೆಸುತ್ತೋ ಇಲ್ಲವೋ ಅನ್ನೋ ಪ್ರಶ್ನೆ ಇದ್ದರೂ, ಪವಿತ್ರಾ ಗೌಡಗೆ ಮಾತ್ರ ಜೈಲಿನೊಳಗಿಂದಲೇ ಒಂದು ಪಾಸಿಟಿವ್ ಸುದ್ದಿ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಪವಿತ್ರಾ ಗೌಡಗೆ ಮನೆಯೂಟ ನೀಡಲು ಕೋರ್ಟ್ ಆದೇಶ ಹೊರಡಿಸಿದೆ.
ಒಂದೆಡೆ ದರ್ಶನ್ ಜೊತೆಗಿನ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ ಪವಿತ್ರಾ ಗೌಡ, ಮತ್ತೊಂದೆಡೆ ಅದೇ ವಿಚಾರವೇ ತಮಗೆ ಸಂಕಷ್ಟದ ದಾರಿ ತೆರೆದಿದೆ ಎಂಬ ಚರ್ಚೆ ಇದೆ. ಕಳೆದ ವರ್ಷ ಹೊಸ ವರ್ಷದ ಹೊತ್ತಿಗೆ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದ್ದ ಪವಿತ್ರಾ, ಈ ವರ್ಷ ಜೈಲಿನ ಕತ್ತಲ ಕೋಣೆಯಲ್ಲಿ ದಿನ ಎಣಿಸುವ ಸ್ಥಿತಿಗೆ ತಲುಪಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಆರಂಭವಾಗಿದ್ದು, ಮುಂದೇನು ಆಗಲಿದೆ ಎಂಬ ಭಯದ ನಡುವೆಯೇ ಪವಿತ್ರಾ ದಿನ ಕಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಮನೆಯೂಟಕ್ಕಾಗಿ ಸಲ್ಲಿಸಿದ್ದ ಅರ್ಜಿಗೆ ಸೆಷನ್ಸ್ ಕೋರ್ಟ್ ಅಸ್ತು ಎಂದಿದೆ. ಆದರೆ ಆದೇಶ ಪ್ರತಿ ತಲುಪಿದರೂ, ಜೈಲಿನ ಆಡಳಿತಾತ್ಮಕ ಪ್ರಕ್ರಿಯೆಗಳ ಕಾರಣದಿಂದ ಇನ್ನೂ ಮನೆಯೂಟ ಪವಿತ್ರಾ ಪಾಲಿಗೆ ಲಭ್ಯವಾಗಿಲ್ಲ.
ಜೈಲು ನಿಯಮಗಳ ಪ್ರಕಾರ ಮನೆಯೂಟ ತರಿಸುವ ವ್ಯಕ್ತಿ ಯಾರು, ಅವರ ಹಾಗೂ ಆರೋಪಿಯ ನಡುವಿನ ಸಂಬಂಧ ಏನು, ಅಗತ್ಯ ದಾಖಲೆಗಳು ಯಾವುವು ಎಂಬ ಮಾಹಿತಿಯನ್ನು ನೀಡಬೇಕಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮನೆಯೂಟ ಆರಂಭವಾಗಲಿದೆ ಎನ್ನಲಾಗಿದೆ.
ಪವಿತ್ರಾ ಗೌಡ ಜೊತೆ ಲಕ್ಷ್ಮಣ್ ಹಾಗೂ ನಾಗರಾಜ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಮನೆಯೂಟಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ದರ್ಶನ್‌ಗೆ ಮಾತ್ರ ಈ ಸೌಲಭ್ಯ ಯಾಕೆ ದೊರೆತಿಲ್ಲ ಎಂಬ ಗೊಂದಲ ಹುಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ದರ್ಶನ್ ಕೂಡ ಮನೆಯೂಟಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂಬ ಮಾತು ಕೇಳಿಬರುತ್ತಿದೆ.
ಇದರ ನಡುವೆ, ಆರೋಪಿಗಳಿಗೆ ಮನೆಯೂಟ ನೀಡುವ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಒಟ್ಟಿನಲ್ಲಿ ಪವಿತ್ರಾ ಗೌಡ ಪಾಲಿಗೆ ಮನೆಯೂಟ ಸಿಕ್ಕಿರುವುದು ಮುಂದಿನ ದಿನಗಳಲ್ಲಿ ಜಾಮೀನು ಅರ್ಜಿಗೂ ದಾರಿ ತೆರೆದೀತಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.



