ರಾಮನಗರ: ಜಿಲ್ಲೆಯ ಮಾಗಡಿ ತಹಶೀಲ್ದಾರ್‌ಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಹೇಳಿದ್ದ ಶಾಸಕ ಹೆಚ್.ಸಿ. ಬಾಲಕೃಷ್ಣ ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ ತಹಶೀಲ್ದಾರ್ ಶರತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಶಾಸಕ, ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು.
ಈ ಹಿನ್ನೆಲೆ ಭಾನುವಾರ ನಡೆದ ಸರ್ಕಾರಿ ನೌಕರರ ತಾಲೂಕು ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಬಾಲಕೃಷ್ಣ, ಅದೇ ವೇದಿಕೆಯಲ್ಲಿದ್ದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.
ಈ ವೇಳೆ ಮಾತನಾಡಿದ ಶಾಸಕ, “ಜನರ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆಯಿಂದ ಒಂದು ರೂಪಾಯಿಯೂ ಅಪೇಕ್ಷಿಸದೆ ಅಧಿಕಾರಿಯನ್ನು ತಾಲೂಕಿಗೆ ಕರೆತಂದಿದ್ದೇನೆ. ಆದರೆ ರೈತರ ಸಮಸ್ಯೆ ಬಗೆಹರಿಯದಿದ್ದರೆ ನೋವಾಗುತ್ತದೆ. ಹಳ್ಳಿಗಾಡಿನಿಂದ ಬಂದ ನಾನು ಸಹಜವಾಗಿ ಆಡುಭಾಷೆಯಲ್ಲಿ ನೇರವಾಗಿ ಮಾತನಾಡಿದ್ದೇನೆ. ಇದರಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು.
ಜನರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳನ್ನು ಜನರು ಬೈಯ್ಯುವುದಿಲ್ಲ, ನನ್ನನ್ನೇ ಬೈಯ್ಯುತ್ತಾರೆ. ಯಾರಿಗೂ ನೋವು ಉಂಟುಮಾಡುವ ಉದ್ದೇಶ ಇರಲಿಲ್ಲ. ಸಮಯ, ಸಂದರ್ಭ ಮತ್ತು ಸನ್ನಿವೇಶದ ಒತ್ತಡದಿಂದ ಆ ಮಾತು ಬಂದಿದೆ ಎಂದು ಸಮಜಾಯಿಷಿ ನೀಡಿದರು.



