ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರ ಓಹಿಯೊ ರಾಜ್ಯದ ಸಿನ್ಸಿನಾಟಿಯಲ್ಲಿರುವ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ವರದಿಯಾಗಿದೆ.
ದಾಳಿಯಲ್ಲಿ ಮನೆಯ ಕಿಟಕಿ ಗಾಜುಗಳು ಒಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ನಡೆದ ವೇಳೆ ವ್ಯಾನ್ಸ್ ಹಾಗೂ ಅವರ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆದ ನಂತರ ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿ ತೀವ್ರ ವಿಚಾರಣೆ ಆರಂಭಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಸಭೆಯ ಬಳಿಕ ವ್ಯಾನ್ಸ್ ವೆಸ್ಟ್ ಪಾಮ್ ಬೀಚ್ನಲ್ಲಿದ್ದ ಗಾಲ್ಫ್ ಕ್ಲಬ್ನಲ್ಲಿ ಇದ್ದರು ಎನ್ನಲಾಗಿದೆ. ಬಳಿಕ ಅವರು ತಮ್ಮ ಸಿನ್ಸಿನಾಟಿ ನಿವಾಸಕ್ಕೆ ಮರಳಿದ್ದಾರೆ. ಶಂಕಿತ ವ್ಯಕ್ತಿ ಮನೆಯ ಒಳಗೆ ಪ್ರವೇಶಿಸದೆ ದೂರದಿಂದಲೇ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಇದು ವ್ಯಾನ್ಸ್ ಕುಟುಂಬದ ವಿರುದ್ಧ ಉದ್ದೇಶಿತ ದಾಳಿಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಅಮೆರಿಕದ ಸೀಕ್ರೆಟ್ ಸರ್ವೀಸ್ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.



