ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೆ ಘೋಷಣೆ ಮಾಡಿರುವ 250 ರೂ. ಪ್ರೋತ್ಸಾಹ ಧನವನ್ನು ಏಜೆಂಟರ ಹಾವಳಿ ತಪ್ಪಿಸಿ ನೇರವಾಗಿ ರೈತರ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳಬೇಕು. ಒಂದು ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸೋಮವಾರ ಗದಗನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ಹಾಗೂ ಖರೀದಿ ಕೇಂದ್ರದಲ್ಲಿ ಆಗಿರುವ ಲೋಪ-ದೋಷಗಳನ್ನು ಸರಿಪಡಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಹಾಗೂ ರೈತ ಮುಖಂಡರುಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಖರೀದಿ ಕೇಂದ್ರಕ್ಕೆ ತರುವ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು. ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆಯಲ್ಲಿ ಅವ್ಯವಹಾರ ಆಗುವ ಆತಂಕ ಇದೆ. ಹಿಂದೆ ಹುಬ್ಬಳ್ಳಿಯಲ್ಲಿ ಈರುಳ್ಳಿ ಖರೀದಿ ಸಂದರ್ಭದಲ್ಲಿ ಅವ್ಯವಹಾರ ಆಗಿತ್ತು. ಗೋವಿನ ಜೋಳ ಖರೀದಿ ಸಂದರ್ಭದಲ್ಲಿಯೂ ಆಗಿತ್ತು. ಸರ್ಕಾರದ ಯೋಜನೆಯ ದುರ್ಲಾಭ ಪಡೆದುಕೊಳ್ಳುವವರೂ ಇರುತ್ತಾರೆ. ಈ ಬಗ್ಗೆ ಎಚ್ಚರ ವಹಿಸಬೇಕು. ಈಗಾಗಲೇ ಏಜೆಂಟರು ಹುಟ್ಟಿಕೊಂಡಿರುತ್ತಾರೆ. ನಿಜವಾದ ರೈತರ ಸಂಪೂರ್ಣ ಮಾಹಿತಿ ಪಡೆದು ಅವರು ಮಾರಿರುವ ಮೆಕ್ಕೆಜೋಳದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು. ಇದರಲ್ಲಿ ಯಾವುದೇ ರೀತಿಯ ತಾರತಮ್ಯ, ಪಕ್ಷಪಾತ, ರಾಜಕಾರಣ ತರಬಾರದು. ಮೆಕ್ಕೆಜೋಳ ಬೆಳೆದ ರಾಜ್ಯದ ಎಲ್ಲ ರೈತರಿಗೂ ಇದರ ಸದುಪಯೋಗ ತಲುಪಬೇಕು. ಒಂದು ವಾರದಲ್ಲಿ ಸಂಪೂರ್ಣ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಸಿ.ಸಿ. ಪಾಟೀಲ ಮಾತನಾಡಿ, ಅರ್ಹರಿಗೆ ಸರ್ಕಾರದ ನೆರವು ತಲುಪಲಿ, ಈ ಪ್ರಕ್ರಿಯೆ ಅನುಷ್ಠಾನದಲ್ಲಿ ಅಕ್ರಮ ಆಗದಿರಲಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಸೇರಿದಂತೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್ಗೆ 1900 ರೂ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಆದರೆ ಪ್ರತಿ ಕ್ವಿಂಟಲ್ಗೆ ಗರಿಷ್ಠ 250 ರೂನಂತೆ ಪಾವತಿಸಲಾಗುವುದು. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಸಂಸ್ಥೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ ಎಂದು ವಿವರಿಸಿದರು.
ಕಳೆದ ವರ್ಷ ಮೆಕ್ಕೆಜೋಳಕ್ಕೆ 2 ಸಾವಿರ ರೂ ಮೇಲೆ ದರ ಸಿಗುತ್ತಿತ್ತು. ಈ ವರ್ಷ ದರ ಸಂಪೂರ್ಣ ಕುಸಿದಿದೆ. ರೈತರು ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗದಗ ಜಿಲ್ಲೆಯ ರೈತರು ವಿಶೇಷವಾಗಿ ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಅಲ್ಲಿಗೆ ಜಿಲ್ಲಾಧಿಕಾರಿಗಳು ಬಂದು ಸರ್ಕಾರಕ್ಕೆ ಎಲ್ಲ ಮಾಹಿತಿ ನೀಡಿದ್ದಾರೆ. ಸರ್ಕಾರ ಮೊದಲು 10 ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈಗ ಖರೀದಿ ಬಹಳ ಮಂದಗತಿಯಲ್ಲಿ ನಡೆಯುತ್ತಿದೆ. ಇದುವರೆಗೂ ಒಂದು ಲಕ್ಷ ಟನ್ ಕೂಡ ಖರೀದಿಯಾಗಿಲ್ಲ. ಖರೀದಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ.
ಬಸವರಾಜ ಬೊಮ್ಮಾಯಿ.
ಸಂಸದರು, ಹಾವೇರಿ-ಗದಗ.



