ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದುವರಿದಿದ್ದು, ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.
ರಾಣಾ ಪ್ರತಾಪ್ ಬೈರಾಗಿ ಕೊಲೆಯಾದ ಹಿಂದೂ ಶಿಕ್ಷಕ. ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಉಂಟಾದ ಅಶಾಂತಿಯ ನಂತರ ನಡೆದ ಇದು ಐದನೇ ಘಟನೆ ಆಗಿದೆ. ಅರುವಾ ಗ್ರಾಮದ ನಿವಾಸಿಯಾಗಿದ್ದ ಬೈರಾಗಿ ಮಾರುಕಟ್ಟೆಯಲ್ಲಿದ್ದಾಗ ದಾಳಿ ನಡೆದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಕಳೆದ ಡಿಸೆಂಬರ್‌ನಿಂದಲೂ ಮೈಮೆನ್ಸಿಂಗ್ ಮತ್ತು ಇತರೆ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ ಹಾಗೂ ಗುಂಡಿನ ದಾಳಿಗಳು ನಡೆದಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಭಾರತ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ಮಧ್ಯಂತರ ಸರ್ಕಾರದ ಅವಧಿಯಲ್ಲಿ 2,900ಕ್ಕೂ ಹೆಚ್ಚು ದಾಳಿ ಪ್ರಕರಣಗಳು ವರದಿಯಾಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.



