ಪುಣೆ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ (81) ಇಂದು ಮುಂಜಾನೆ ಪುಣೆಯಲ್ಲಿ ನಿಧನರಾದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಿನ ಜಾವ ಸುಮಾರು 3:30ಕ್ಕೆ ಕೊನೆಯುಸಿರೆಳೆದರು. ಕಲ್ಮಾಡಿ ಅವರು ಪತ್ನಿ, ಮಗ–ಸೊಸೆ, ಇಬ್ಬರು ವಿವಾಹಿತ ಪುತ್ರಿಯರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪುಣೆಯ ಎರಾಂಡ್‌ವಾನೆ ಪ್ರದೇಶದಲ್ಲಿರುವ ನಿವಾಸದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ನಂತರ ನವಿ ಪೇತ್‌ನಲ್ಲಿರುವ ವೈಕುಂಠ ಚಿತಾಗಾರದಲ್ಲಿ ಮಧ್ಯಾಹ್ನ 3:30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.
ಮಂಗಳೂರು ಮೂಲದ ಡಾ. ಕೆ. ಶಾಮರಾವ್ ಕಲ್ಮಾಡಿ ಮತ್ತು ಶಾಂತಾ ರಾವ್ ದಂಪತಿಯ ಪುತ್ರರಾಗಿದ್ದ ಸುರೇಶ್ ಕಲ್ಮಾಡಿಗೆ ಕೊಂಕಣಿ, ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಹಾಗೂ ತುಳು ಭಾಷೆಗಳ ಮೇಲೆ ಪಾಂಡಿತ್ಯವಿತ್ತು. 1960ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದ ಅವರು 1964 ರಿಂದ 1972ರವರೆಗೆ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದರು. ಬಳಿಕ 1972 ರಿಂದ 1974ರವರೆಗೆ ಎನ್‌ಡಿಎಯ ವಾಯುಪಡೆ ತರಬೇತಿ ಘಟಕದಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಿ ಸ್ಕ್ವಾಡ್ರನ್ ಲೀಡರ್ ಹುದ್ದೆಯಲ್ಲಿ ವಾಯುಸೇನೆಯಿಂದ ನಿವೃತ್ತರಾದರು.
1977ರಲ್ಲಿ ಪುಣೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಲ್ಮಾಡಿ, 1982 ರಿಂದ 1996ರವರೆಗೆ ಮೂರು ಅವಧಿಗೆ ಶಾಸಕರಾಗಿದ್ದರು. 1998ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದು, 1996ರಲ್ಲಿ 11ನೇ ಮತ್ತು 2004ರಲ್ಲಿ 14ನೇ ಲೋಕಸಭೆಗೆ ಪುಣೆಯಿಂದ ಆಯ್ಕೆಯಾದರು. ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ (1995–96) ಅವರು ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಲ್ಮಾಡಿ ಅವರು 1996 ರಿಂದ 2012ರವರೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ, 2000 ರಿಂದ 2013ರವರೆಗೆ ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.



