ತಮಿಳು ಚಿತ್ರರಂಗದ ದಿಗ್ಗಜ ನಿರ್ದೇಶಕ ಭಾರತಿರಾಜ ಆರೋಗ್ಯ ಸ್ಥಿರವಾಗಿದ್ದರೂ ಇನ್ನೂ ಕ್ರಿಟಿಕಲ್ ಕೇರ್ ಯೂನಿಟ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೀವ್ರ ತೊಂದರೆಯಿಂದ ಡಿಸೆಂಬರ್ 27ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಕುರಿತು ಆಸ್ಪತ್ರೆ ಅಧಿಕೃತ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿದೆ.
ಬುಲೆಟಿನ್ ಪ್ರಕಾರ, ಭಾರತಿರಾಜ ಅವರಿಗೆ ತೀವ್ರ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದು, ಅಂಗಾಂಗಗಳ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ವೈದ್ಯರ ತಜ್ಞ ತಂಡ ಅವರ ಮೇಲೆ ನಿರಂತರ ನಿಗಾ ವಹಿಸಿದ್ದು, ಸ್ಥಿತಿ ಸ್ಥಿರವಾಗಿದೆ ಎಂದರೂ ಸದ್ಯ CCU ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದೆ.
ಈ ಸುದ್ದಿಯ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಲವು ಖ್ಯಾತ ನಿರ್ದೇಶಕರು, ನಿರ್ಮಾಪಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಎಆರ್ ಮುರುಗದಾಸ್, ಲಿಂಗುಸಾಮಿ, ಅಮೀರ್, ಸೀನು ರಾಮಸಾಮಿ, ಚಿತ್ರಾ ಲಕ್ಷ್ಮಣನ್, ಸೀಮನ್ ಸೇರಿದಂತೆ ಅನೇಕರು ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.
84 ವರ್ಷದ ಭಾರತಿರಾಜ ಇತ್ತೀಚೆಗೆ ತಮ್ಮ ಪುತ್ರ, ನಟ-ನಿರ್ದೇಶಕ ಮನೋಜ್ ಭಾರತಿರಾಜ ಅವರನ್ನು ಕಳೆದುಕೊಂಡ ದುಃಖದಿಂದ ಹೊರಬರಲಾಗದೆ ಇದ್ದರು ಎನ್ನಲಾಗಿದೆ. 2025ರ ಮಾರ್ಚ್ 25ರಂದು ಮನೋಜ್ ಹೃದಯಾಘಾತದಿಂದ ನಿಧನರಾದ ಬಳಿಕ ಭಾರತಿರಾಜ ತೀವ್ರವಾಗಿ ಮನೋನೊಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಪದ್ಮಶ್ರೀ ಹಾಗೂ ಆರುಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳ ಪುರಸ್ಕೃತರಾದ ಭಾರತಿರಾಜ, ಸ್ಟುಡಿಯೋ ಚಿತ್ರೀಕರಣಕ್ಕೆ ಬದಲಾಗಿ ನೈಜ ಗ್ರಾಮೀಣ ಬದುಕನ್ನು ಸಿನಿಮಾಗಳಲ್ಲಿ ತೋರಿಸಿ ತಮಿಳು ಚಿತ್ರರಂಗದ ಇತಿಹಾಸವನ್ನೇ ಬರೆದವರು. ನಾಲ್ಕು ದಶಕಗಳ ಕಾಲ ಹಲವು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಈ ದಿಗ್ಗಜರ ಆರೋಗ್ಯ ವಿಚಾರ ಅಭಿಮಾನಿಗಳಲ್ಲಿ ತೀವ್ರ ಚಿಂತೆಯನ್ನು ಹುಟ್ಟಿಸಿದೆ.
ಸದ್ಯ ಎಲ್ಲೆಡೆಯಿಂದ ಭಾರತಿರಾಜ ಶೀಘ್ರ ಚೇತರಿಸಿಕೊಳ್ಳಲಿ ಎಂಬ ಹಾರೈಕೆಗಳು ಹರಿದು ಬರುತ್ತಿವೆ.



