ಮಡಿಕೇರಿ: ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯ ಹೆಮ್ಮೆಯ ನಟಿ ರಶ್ಮಿಕಾ ಮಂದಣ್ಣ ಇದೀಗ ಆದಾಯ ತೆರಿಗೆ ಪಾವತಿಯಲ್ಲಿ ದಾಖಲೆ ಬರೆದಿದ್ದಾರೆ. 2025–26ನೇ ಆರ್ಥಿಕ ವರ್ಷದಲ್ಲಿ ಕೊಡಗು ಜಿಲ್ಲೆಯಿಂದ ಅತಿ ಹೆಚ್ಚು Income Tax ಪಾವತಿಸಿದ ವ್ಯಕ್ತಿಯಾಗಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿದ್ದಾರೆ.
ಕನ್ನಡ ಸಿನಿಮಾರಂಗದಿಂದ ಚಿತ್ರಜಗತ್ತಿಗೆ ಪ್ರವೇಶಿಸಿ, ನಂತರ ತೆಲುಗು ಹಾಗೂ ಬಾಲಿವುಡ್‌ನಲ್ಲೂ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ತಮ್ಮ ವೃತ್ತಿಪರ ವ್ಯವಹಾರಗಳನ್ನು ರಶ್ಮಿಕಾ ಮಂದಣ್ಣ ಪ್ರೊಡಕ್ಷನ್ಸ್ LLP ಮೂಲಕ ನಡೆಸುತ್ತಿದ್ದಾರೆ.
2022ರ ಆಗಸ್ಟ್‌ನಲ್ಲಿ ಆರಂಭಗೊಂಡ ಈ ಪ್ರೊಡಕ್ಷನ್ ಸಂಸ್ಥೆ ಇದೀಗ 2025–26ನೇ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದೆ. ಈ ಹಣಕಾಸು ವರ್ಷದ ಮೂರು ಹಂತಗಳ ತೆರಿಗೆ ಪಾವತಿ ಅವಧಿಯಲ್ಲೂ ರಶ್ಮಿಕಾ ಮಂದಣ್ಣ ನಿರಂತರವಾಗಿ ಮೊದಲ ಸ್ಥಾನದಲ್ಲಿರುವುದು ಗಮನಾರ್ಹವಾಗಿದೆ.
ಮಾರ್ಚ್‌ನಲ್ಲಿ ಹಣಕಾಸು ವರ್ಷ ಅಂತ್ಯವಾಗಲಿದ್ದು, ಅಲ್ಲಿಯವರೆಗೂ ಈ ಸ್ಥಾನವನ್ನು ರಶ್ಮಿಕಾ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ರಶ್ಮಿಕಾ ಮಂದಣ್ಣ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ತೆರಿಗೆ ಶಿಸ್ತು ಮತ್ತು ರಾಷ್ಟ್ರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ವಿಕಸಿತ ಭಾರತದ ಬ್ರ್ಯಾಂಡ್ ಅಬಾಸಿಡರ್ ಆಗಿಯೂ ಗುರುತಿಸಲಾಗಿದೆ.



