HomeUncategorizedಬ್ಯಾಂಕುಗಳು ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಲಿ: ಸಂಸದ ಬಸವರಾಜ ಬೊಮ್ಮಾಯಿ

ಬ್ಯಾಂಕುಗಳು ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಲಿ: ಸಂಸದ ಬಸವರಾಜ ಬೊಮ್ಮಾಯಿ

For Dai;y Updates Join Our whatsapp Group

Spread the love

  • ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಗದಗ: ಬ್ಯಾಂಕುಗಳು ಕೇವಲ ಹಣಕಾಸು ಸಂಸ್ಥೆಗಳಲ್ಲ, ಸಮಾಜದ ಆರ್ಥಿಕ ಚಲನೆಗೆ ದಿಕ್ಕು ತೋರಿಸುವ ಪ್ರಮುಖ ಸಂಸ್ಥೆಗಳಾಗಿವೆ. ಬ್ಯಾಂಕುಗಳಲ್ಲಿ ಇರುವ ಹಣ ಸಂಪೂರ್ಣವಾಗಿ ಸಾರ್ವಜನಿಕರದ್ದೇ ಆಗಿದ್ದು, ಆ ಹಣವನ್ನು ಸ್ಥಳೀಯವಾಗಿ ಸದ್ಬಳಕೆ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಹಕಾರ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಂಗ್ರಹವಾಗುವ ಬ್ಯಾಂಕ್ ಹಣವನ್ನು ಇದೇ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಇದರಿಂದ ಉದ್ಯೋಗ ಸೃಷ್ಟಿ, ವ್ಯಾಪಾರ ವೃದ್ಧಿ ಹಾಗೂ ಗ್ರಾಮೀಣ ಆರ್ಥಿಕ ಬಲವರ್ಧನೆ ಸಾಧ್ಯವಾಗುತ್ತದೆ. ಈ ಮೂಲಕ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು ಎಂದು ಸಂಸದರು ಅಭಿಪ್ರಾಯಪಟ್ಟರು.

ರೈತರು, ಮಹಿಳೆಯರು, ಯುವ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ಸುಲಭವಾಗಿ ದೊರಕುವಂತೆ ಬೃಹತ್ ಮಟ್ಟದಲ್ಲಿ ಲೋನ್ ಮೇಳಗಳನ್ನು ಆಯೋಜಿಸಬೇಕು. ಸಾಲ ಅರ್ಜಿಗಳ ಪ್ರಕ್ರಿಯೆ ಸರಳವಾಗಿರಬೇಕು. ಅರ್ಹ ಫಲಾನುಭವಿಗಳಿಗೆ ಯಾವುದೇ ಅನಗತ್ಯ ಅಡೆತಡೆ ಆಗಬಾರದು ಎಂದು ಹೇಳಿದರು.

ಬಡತನ ನಿವಾರಣೆಯಲ್ಲಿ ಹೌಸಿಂಗ್ ಲೋನ್ ಮಹತ್ವದ ಪಾತ್ರ ವಹಿಸುತ್ತದೆ. ಸ್ವಂತ ಮನೆ ಹೊಂದುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಮಟ್ಟ ಸುಧಾರಿಸುತ್ತದೆ. ಈ ಹಿನ್ನೆಲೆಯಲ್ಲಿ ಗೃಹ ಸಾಲ ವಿತರಣೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸದರು ಸಲಹೆ ನೀಡಿದರು.

ಬ್ಯಾಂಕುಗಳು ಕಚೇರಿಗಳಿಗೆ ಸೀಮಿತವಾಗದೆ ಜನರ ಬಳಿಗೆ ಹೋಗಬೇಕು. ಸಾಲ ಮಂಜೂರಾತಿಯಲ್ಲಿ ವಿಳಂಬವಾಗಬಾರದು. ಅರ್ಹರಿಗೆ ಯಾವುದೇ ಅಡಚಣೆ ಇಲ್ಲದೆ ಸಾಲ ಸೌಲಭ್ಯ ದೊರೆಯಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ.ವಿ ಮಾತನಾಡಿ, ಜಿಲ್ಲೆಯಲ್ಲಿ 31-12-2025ರವರೆಗೆ ಲೀಡ್ ಬ್ಯಾಂಕ್‌ನ 183 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 2025ರವರೆಗೆ ಜಿಲ್ಲೆಯ ಸಾಲ ಠೇವಣಿ ಅನುಪಾತ ಶೇ. 102.18ರಷ್ಟಾಗಿರುತ್ತದೆ. ಎಲ್ಲ ಬ್ಯಾಂಕ್‌ನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಲ ಯೋಜನೆಗಳಾದ ಪ್ರಧಾನಮಂತ್ರಿ ಮುದ್ರಾ ಯೋಜನೆ, ಉದ್ಯೋಗಿನಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ ಅರಸ ಹಿಂದುಳಿದ ಅಭಿವೃದ್ಧಿ ನಿಗಮ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿ.ಪಂನ ಎನ್‌ಆರ್‌ಎಲ್‌ಎಂ (ಸ್ವ-ಸಹಾಯ ಗುಂಪು), ಪಿಎಂಎವೈ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ, ಪಿಎಂಎಫ್‌ಬಿವೈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ನಬಾರ್ಡ್‌ನ ಎಜಿಎಂ ಮಯೂರ ಕಾಂಬ್ಳೆ, ಆರ್‌ಬಿಐ ಎಜಿಎಂ ಸೂರಜ ಎಸ್, ಎಸ್‌ಬಿಐ ರೀಜನಲ್ ಮ್ಯಾನೇಜರ್ ನಾಗಸುಬ್ಬಾರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು.

ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕು. ಸರ್ಕಾರದ ಜನಪರ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ತಲುಪುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಬ್ಯಾಂಕುಗಳು ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಬೇಕು. ಲಾಭವೇ ಮುಖ್ಯ ಎಂಬ ಮನೋಭಾವವನ್ನು ಬಿಟ್ಟು, ಬ್ಯಾಂಕುಗಳು ಸ್ಥಾಪನೆಯಾದ ಮೂಲ ಉದ್ದೇಶವನ್ನು ಮೊದಲು ಈಡೇರಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!