ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಹೊರವಲಯದಲ್ಲಿರುವ ರೇಲ್ವೆ ಬೈಪಾಸ್ ನಿಲ್ದಾಣದಲ್ಲಿ ಸಕಲ ಮೂಲಭೂತ ಸೌಲಭ್ಯ ಆದ ನಂತರ ರೈಲು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಗದಗ ಜಿಲ್ಲಾ ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಸಂಸದ ಬಸವರಾಜ ಬೊಮ್ಮಾಯಿ ಅವರ ಮೂಲಕ ಕೇಂದ್ರ ರೇಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಗದಗಿಗೆ ಆಗಮಿಸಿದ್ದ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅಸೋಸಿಯೇಶನ್ನ ಅಧ್ಯಕ್ಷ ಸುರೇಶ ಬನಸಾಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ವ್ಯಾಪಾರಸ್ಥರು, ವೃದ್ಧರು, ಮಹಿಳೆಯರು, ಮಕ್ಕಳು ರೇಲ್ವೆ ಪ್ರವಾಸ ಕೈಗೊಂಡು ಗದಗಿನ ಈ ರೇಲ್ವೆ ಬೈಪಾಸ್ ಸ್ಟೇಷನ್ನಲ್ಲಿ ಇಳಿಯುವುದು, ಹತ್ತುವುದನ್ನು ಮಾಡಲು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಬೈಪಾಸ್ ನಿಲ್ದಾಣದಲ್ಲಿ ಭದ್ರತೆ ಇಲ್ಲ, ಪೊಲೀಸ್ ಉಸ್ತುವಾರಿ ಇಲ್ಲ, ಬೈಪಾಸ್ ನಿಲ್ದಾಣದಿಂದ ಮಧ್ಯರಾತ್ರಿ ಗದಗ ಸಿಟಿಗೆ ಸಂಚರಿಸಲು ಬಸ್, ಅಟೋ ವ್ಯವಸ್ಥೆ ಇಲ್ಲ. ಆದ್ದರಿಂದ ಈ ಎಲ್ಲ ವ್ಯವಸ್ಥೆಯ ಬಳಿಕವೇ ಇಲ್ಲಿ ರೈಲು ನಿಲುಗಡೆ ಆಗಬೇಕು ಎಂದು ಮನವಿಯಲ್ಲಿ ವಿವರಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಬಸವರಾಜ ಬೊಮ್ಮಾಯಿ, ಮನವಿಯ ಗಂಭೀರತೆಯನ್ನು ಅರಿತು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರ ಗಮನಕ್ಕೆ ತರುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ಹೀರಾಚಂದ್ರ ಸೆಮ್ಲಾನಿ, ಖಜಾಂಚಿ ಮಹಾವೀರ ಸೋಳಂಕಿ, ಸುರೇಶ ಓಸ್ವಾಲ, ಹರೀಶ್ ಶಹಾ, ಸುರೇಶ ಕೋಠಾರಿ, ಪೃಥ್ವಿರಾಜ ಬನಸಾಲಿ, ಮದನಲಾಲ ಲುಂಕಡ, ಪ್ರವೀಣ ಸಂಕಲೇಚಾ, ಸ್ವರೂಪ ದೂಖಾ, ಧೀರಜ್ ಭಾಪಣಾ, ರಾಜೇಂದ್ರ ಸಂಘವಿ, ಮೋಹನ ಪವಾರ, ಮಹಾವೀರ ಸಂಕಲೇಚಾ, ರಾಜೇಂದ್ರ ಪಾಲರೇಚಾ, ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ರಾಜು ಕುರಡಗಿ ಮುಂತಾದವರಿದ್ದರು.



