ಮೈಸೂರು:- ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗೋದು ಗ್ಯಾರಂಟಿ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮತ್ತು ಅಹಿಂದ ವರ್ಗ ಮುಳುಗುತ್ತದೆ. ಸಿದ್ದರಾಮಯ್ಯ ಇಲ್ಲದೆ ಇರೋ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟು ಜನನಾ ಸಿಎಂ ಸಿಎಂ ಎಂದು ಸುಮ್ಮನೆ ಘೋಷಣೆ ಕೂಗ್ತಿರಾ? ನನ್ನನ್ನು ಸೇರಿದಂತೆ ಎಲ್ಲರನ್ನೂ ಸುಮ್ಮನೆ ಮುಂದಿನ ಸಿಎಂ ಸಿಎಂ ಘೋಷಣೆ ಕೂಗುತ್ತಾರೆ. ದಲಿತ ಸಂಘಟನೆಯ ಮುಖಂಡರು ಬುದ್ಧಿವಂತರು. ಸಿದ್ದರಾಮಯ್ಯರೇ ಸಿಎಂ ಆಗಿರಲಿ. ಅವರು ಬದಲಾಗುವುದಾದರೆ ದಲಿತರಿಗೆ ಅವಕಾಶ ಕೊಡಿ ಅಂತಾರೆ ಎಂದು ತಿಳಿಸಿದರು.
2028 ರವರೆಗೂ ಸಿದ್ದರಾಮಯ್ಯ ಗಟ್ಟಿಯಾಗಿರಬೇಕು. ಈ ಬಾರಿ ಸಿದ್ದರಾಮಯ್ಯ ತಮ್ಮ ಅವಧಿ ಪೂರೈಸಬೇಕು. ಮುಂದಿನ ಅವಧಿಗೂ ಸಿದ್ದರಾಮಯ್ಯ ಇರಬೇಕು ಎಂಬುದಕ್ಕೆ ನಮ್ಮ ತಕರಾರು ಇಲ್ಲ. ‘ಮತ್ತೆ ಮುಖ್ಯಮಂತ್ರಿ’ ಎಂಬ ನಾಟಕವನ್ನು ಸಿಎಂ ಸಿದ್ದರಾಮಯ್ಯರು ನೋಡಬೇಕು. ಮತ್ತೆ ಮುಖ್ಯಮಂತ್ರಿ ನಾಟಕದಲ್ಲಿ ಇಡೀ ರಾಜಕೀಯದ ಚಿತ್ರಣವೇ ಇದೆ. ಸಿದ್ದರಾಮಯ್ಯ ಯಾವತ್ತೂ ಹೊಗಳಿಕೆಗೆ ಬೆಲೆ ಕೊಟ್ಟವರಲ್ಲ. ಇದ್ದರೆ ಇರುತ್ತೆ, ಹೋದ್ರೆ ಹೋಗುತ್ತೆ ಬಿಡಿ ಎನ್ನುವ ಮನಸ್ಥಿತಿ ಸಿದ್ದರಾಮಯ್ಯರದ್ದು. ಹಾಗಂತ ನಾವು ಅವರನ್ನು ಬಿಡುವುದಕ್ಕೆ ಬಿಡಬಾರದು. ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗುತ್ತದೆ. ಸಿದ್ದರಾಮಯ್ಯ ಮುಳುಗಿದರೆ ಅಹಿಂದ ವರ್ಗ ಮುಳುಗುತ್ತದೆ ಎಂದು ಎಚ್ಚರಿಸಿದರು.



