ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಜನಪರ ವಿಚಾರಗಳಲ್ಲಿ ಅಧಿಕಾರಿಗಳು ಜನರ ಮೂಗಿಗೆ ತುಪ್ಪ ಒರೆಸುವ ಕ್ರಮವಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ ಸಲ್ಲದು ಎಂದು ಸ್ಪಷ್ಟಪಡಿಸಿದರು.
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ-ಮನೆಗೆ ನೀರು ತಲುಪುವಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡದೇ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದರು ಸೂಚಿಸಿದರು.
ಕೇಂದ್ರ ಸರ್ಕಾರವು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಹಿತದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಯಾವುದೇ ವಿಳಂಬ, ಅಸಡ್ಡೆಗೆ ಅವಕಾಶ ನೀಡಬಾರದು ಎಂದು ಸಂಸದರು ತಿಳಿಸಿದರು.
ಶಾಲೆ ಎಂಬುದು ಪವಿತ್ರ ಸ್ಥಳ. ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿ ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಈ ಕಾರ್ಯಕ್ಕೆ ಗ್ರಾ.ಪಂ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗ ಪಡೆಯುವಂತೆ ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಳ್ಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ಒದಗಿಸಬೇಕು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸಂಬಂಧಿತ ಮಾಹಿತಿಯನ್ನು ಸಭೆಗೆ ತರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಿಲ್ಲೆಯ ಕೆಲವೊಂದು ಶಾಲಾ ಆವರಣಗಳಲ್ಲಿ ಸಾರಾಯಿ ಬಾಟಲಿಗಳು ಬಿದ್ದಿರುವುದು ಕಂಡುಬರುತ್ತಿವೆ. ಎಲ್ಲ ಶಾಲೆಗಳಲ್ಲಿ ಸಿಸಿ ಟಿವಿ ಅಳವಡಿಸಲು ಕ್ರಮ ವಹಿಸಬೇಕು ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಜೆಜೆಎಂ ಅಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಗ್ರಾಮದ ಪ್ರತಿ ಮನೆಗೂ ನೀರು ತಲುಪಬೇಕು. ಆದರೆ ಈವರೆಗೂ ಕೇವಲ ಪೈಪ್ಲೈನ್ ಅಳವಡಿಕೆ ಸೇರಿದಂತೆ ಇತರೆ ಕಾರ್ಯಗಳನ್ನಷ್ಟೇ ಮಾಡಿದ್ದು, ಜೆಜೆಎಂ ಯೋಜನೆ ಸಂಪೂರ್ಣ ಯಶಸ್ವಿಯಾಗಿಲ್ಲ. ನೀರು ಮನೆ ಬಾಗಿಲಿಗೆ ತಲುಪಿದಾಗಷ್ಟೇ ಯೋಜನೆಯ ಸದ್ಬಳಕೆಯಾದಂತಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಅವಳಿ ನಗರದ ನೀರು ಪೂರೈಕೆ ಸಂಬಂಧಿ ವ್ಯವಸ್ಥಿತವಾಗಿ ಯೋಜನೆಯನ್ನು ಕೊಲ್ಲುವ ಪಿತೂರಿ ನಡೆಯುತ್ತಿದೆ. ಅಮೃತ ಯೋಜನೆಯ ಅನುದಾನ ಕೇಂದ್ರ ಸರ್ಕಾರದ್ದು. ಅದನ್ನು ಸದ್ಬಳಕೆ ಮಾಡಬೇಕು. ಬಡವರು ಮತ್ತು ಅರ್ಹರಿಗೆ ಮನೆ ಮಂಜೂರು ಮಾಡುವ ಮನಸ್ಸು ಅಧಿಕಾರಿಗಳಲ್ಲಿ ಇರಬೇಕು. ಮನೆ ಮಂಜೂರು ಮಾಡದಿರುವುದಕ್ಕೆ ನಿಮ್ಮಲ್ಲಿ 101 ಕಾರಣಗಳಿರುತ್ತವೆ, ಆ ಮನೋಭಾವ ಬಿಡಿ. ಜೊತೆಗೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ನಡೆದಿದೆ ಎಂಬ ದೂರುಗಳು ಕೇಳಿಬರುತ್ತಿವೆ.
– ಬಸವರಾಜ ಬೊಮ್ಮಾಯಿ, ಸಂಸದರು, ಹಾವೇರಿ–ಗದಗ.



